11 ದಿನದಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಮತ್ತೆ ವರ್ಗಾವಣೆ

ಬೆಂಗಳೂರು, ಜ.11: ಹನ್ನೊಂದು ದಿನಗಳ ಹಿಂದೆಯಷ್ಟೇ ವರ್ಗಾವಣೆ ಗೊಂಡಿದ್ದ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರನ್ನು ಪುನಃ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿರುವುದು ವಿವಾದಕ್ಕೆ ಎಡೆಮಾಡಿದೆ.
ಈ ಹಿಂದೆ ನಗರ ಪೊಲೀಸ್ ಇಲಾಖೆಯ ಆಡಳಿತ ವಿಭಾಗದ ಐಜಿಪಿಯಾಗಿದ್ದ ಹೇಮಂತ್ ನಿಂಬಾಳ್ಕರ್ ಅವರನ್ನು ಡಿ.31ರಂದು ಆಂತರಿಕ ಭದ್ರತೆ ವಿಭಾಗದ ಐಜಿಪಿಯಾಗಿ ವರ್ಗಾವಣೆ ಮಾಡಿತ್ತು. ಇದೀಗ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಐಜಿಪಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ನಿರ್ಭಯಾ ನಿಧಿ ಗುತ್ತಿಗೆ ಯೋಜನೆ ಟೆಂಡರ್ ಪ್ರಕ್ರಿಯೆಯಲ್ಲಿ ನಿಂಬಾಳ್ಕರ್ ಪಾತ್ರದ ಬಗ್ಗೆ ಅಂದಿನ ಗೃಹ ಕಾರ್ಯದರ್ಶಿ ಡಿ.ರೂಪಾ ಆರೋಪಿಸಿದ್ದರು. ಬಳಿಕ ಇಬ್ಬರೂ ಐಪಿಎಸ್ ಅಧಿಕಾರಿಗಳ ನಡುವೆ ವಾದ ಪ್ರತಿವಾದ ನಡೆದಿತ್ತು.
ತದನಂತರ ಸರ್ಕಾರ ರೂಪಾ ಅವರನ್ನು ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಿದರೆ, ಹೇಮಂತ್ ನಿಂಬಾಳ್ಕರ್ ಅವರನ್ನು ಆಂತರಿಕ ಭದ್ರತೆ ವಿಭಾಗದ ಐಜಿಪಿ ಹೊಣೆ ನೀಡಲಾಗಿತ್ತು. ಇದರ ನಡುವೆ ಕೇವಲ 11 ದಿನಗಳಲ್ಲಿ ಮತ್ತೊಮ್ಮೆ ವರ್ಗಾವಣೆ ಮಾಡಲಾಗಿದೆ.





