ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಉಪಸಮಿತಿ: ಭಾರತದ ಅಧ್ಯಕ್ಷತೆಗೆ ಚೀನಾ ಅಡ್ಡಗಾಲು

ಹೊಸದಿಲ್ಲಿ, ಜ.12: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಯೋತ್ಪಾದನೆ ನಿಗ್ರಹ ಕುರಿತ ಪ್ರಮುಖ ಉಪಸಮಿತಿಗಳ ಅಧ್ಯಕ್ಷ ಸ್ಥಾನ ಭಾರತಕ್ಕೆ ದಕ್ಕದಂತೆ ಚೀನಾ ಅಡ್ಡಗಾಲು ಹಾಕಿದೆ ಎಂದು ರಾಜತಾಂತ್ರಿಕ ಮೂಲಗಳು ಹೇಳಿವೆ.
ಭಯೋತ್ಪಾದನೆ ನಿಗ್ರಹ ಸಮಿತಿ ಮತ್ತು ತಾಲಿಬಾನ್ ಮತ್ತು ಲಿಬಿಯಾ ದಿಗ್ಬಂಧನ ಸಮಿತಿಗಳ ಅಧ್ಯಕ್ಷತೆ ತನಗೆ ಲಭ್ಯವಾಗಿದೆ ಎಂದು ಭಾರತ ಕಳೆದ ವಾರ ಹೇಳಿಕೆ ನೀಡಿತ್ತು. ಆದರೆ ಚೀನಾ ಅಡ್ಡಗಾಲು ಹಾಕಿದ ಕಾರಣದಿಂದಾಗಿ, ಹಫೀಝ್ ಸಯೀದ್ ಮತ್ತು ಅಝರ್‌ನಂಥ ಅಂತಾರಾಷ್ಟ್ರೀಯ ಭಯೋತ್ಪಾದಕರು ಹಾಗೂ ಲಷ್ಕರ್ ಇ ತೊಯ್ಬಾದಂಥ ಉಗ್ರ ಸಂಘಟನೆಗಳನ್ನು ನಿಷೇಧಿಸಿದ ಪ್ರಮುಖ ಅಲ್ ಖೈದಾ ದಿಗ್ಬಂಧನ ಸಮಿತಿಯ ಅಧ್ಯಕ್ಷತೆ ಭಾರತಕ್ಕೆ ದಕ್ಕಿಲ್ಲ ಎಂದು ತಿಳಿದುಬಂದಿದೆ.
ಚೀನಾ ಈ ಹಿಂದೆಯೂ ಹಲವು ಬಾರಿ ಪಾಕಿಸ್ತಾನಕ್ಕೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಪಠಾಣ್‌ಕೋಟ್ ದಾಳಿಯ ರೂವಾರಿ ಅಝರ್‌ನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕ ಪಟ್ಟಿಗೆ ಸೇರಿಸುವ ಸಮಿತಿ ಪ್ರಯತ್ನವನ್ನು ತಡೆದಿತ್ತು. ಆದರೆ ಪುಲ್ವಾಮಾ ದಾಳಿ ಬಳಿಕ ಅಮೆರಿಕ, ಫ್ರಾನ್ಸ್ ಹಾಗೂ ಬ್ರಿಟನ್ ಒತ್ತಡದಿಂದ ಅಂತಿಮವಾಗಿ ಚೀನಾದ ಹಿಡಿತ ತಪ್ಪಿತ್ತು.
ಇದೀಗ ಅಲ್ ಖೈದಾ ದಿಗ್ಬಂಧನ ಸಮಿತಿಯ ಅಧ್ಯಕ್ಷತೆ ಭಾರತಕ್ಕೆ ನೀಡುವುದಕ್ಕೆ ಚೀನಾ ಅಧಿಕೃತವಾಗಿ ವಿರೋಧ ವ್ಯಕ್ತಪಡಿಸಿದೆ ಎಂದು ಪಿ-5 ದೇಶಗಳ ರಾಜತಾಂತ್ರಿಕ ಮೂಲಗಳು ಸ್ಪಷ್ಟಪಡಿಸಿವೆ. ಚೀನಾ ವಿರೋಧದ ಕಾರಣದಿಂದ ಈ ಸಮಿತಿಯ ಘೋಷಣೆ ವಿಳಂಬವಾಗಲಿದೆ ಆದರೆ ಭಾರತ ಮುಂದಿನ ವರ್ಷ ಭಯೋತ್ಪಾದನೆ ನಿಗ್ರಹ ಸಮಿತಿಯ ಅಧ್ಯಕ್ಷತೆ ವಹಿಸಲಿದೆ ಎಂದು ಮೂಲಗಳು ಹೇಳಿವೆ.







