ನಾಲ್ವರು ಕೃಷಿ ಕಾಯ್ದೆಯ ಬೆಂಬಲಿಗರನ್ನೇ ಸಮಿತಿಗೆ ನೇಮಿಸಿದ ಸುಪ್ರೀಂಕೋರ್ಟ್: ವರದಿ

ಭೂಪಿಂದರ್ ಸಿಂಗ್, ಅನಿಲ್ ಘನ್ವಾತ್, ಅಶೋಕ್ ಗುಲಾಟಿ, ಪ್ರಮೋದ್ ಜೋಶಿ
ಹೊಸದಿಲ್ಲಿ: ಈಗ ನಡೆಯುತ್ತಿರುವ ರೈತರುಗಳ ಪ್ರತಿಭಟನೆಗೆ ಪರಿಹಾರ ಒದಗಿಸಲು ಸುಪ್ರೀಂಕೋರ್ಟ್ ಮಂಗಳವಾರ ರಚಿಸಿರುವ ಸಮಿತಿಯಲ್ಲಿರುವ ನಾಲ್ವರು ಸದಸ್ಯರುಗಳು ಈ ಹಿಂದೆ ಕೃಷಿ ಕಾಯ್ದೆ ಪರ ನಿಲುವು ತಾಳಿದ್ದರು ಎಂಬ ವಿಚಾರವನ್ನು NDTV ಪತ್ತೆ ಹಚ್ಚಿದೆ.
ಸೆಪ್ಟಂಬರ್ ನಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟಿರುವ ಕೇಂದ್ರದ ಕೃಷಿ ಕಾನೂನುಗಳನ್ನು ಪ್ರಶ್ನಿಸಿ ಹಲವಾರು ಅರ್ಜಿಗಳು ಸಲ್ಲಿಸಲ್ಪಟ್ಟಿರುವ ಕಾರಣ ನ್ಯಾಯಾಲಯವು ಕೃಷಿ ಕಾಯ್ದೆಗೆ ಸಂಬಂಧಿಸಿ ರೈತರುಗಳ ಕುಂದುಕೊರತೆಯನ್ನು ಆಲಿಸಲು, ಸರಕಾರದ ಅಭಿಪ್ರಾಯ ಕೇಳಿ ಶಿಫಾರಸು ಮಂಡಿಸಲು ಇಂದು ಸಮಿತಿ ರಚಿಸಬೇಕೆಂದು ಆದೇಶಿಸಿತ್ತು. ಮಧ್ಯಾಹ್ನ ನ್ಯಾಯಾಲಯವು ಸಮಿತಿಯನ್ನು ನೇಮಿಸಿತ್ತು.
ಸಮಿತಿಯ ಪಟ್ಟಿಯಲ್ಲಿ ಭಾರತೀಯ ಕಿಸಾನ್ ಯೂನಿಯನ್ ಹಾಗೂ ಅಖಿಲ ಭಾರತ ಕಿಸಾನ್ ಸಮನ್ವಯ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಭೂಪಿಂದರ್ ಸಿಂಗ್ ಮಾನ್, ಕೃಷಿ ಆರ್ಥಿಕ ತಜ್ಞ ಹಾಗೂ ದಕ್ಷಿಣ ಏಶ್ಯ,ಅಂತರ್ ರಾಷ್ಟ್ರೀಯ ಆಹಾರ ನೀತಿ ಸಂಶೋಧನೆ ಸಂಸ್ಥೆಯ ನಿರ್ದೇಶಕರಾದ ಡಾ.ಪ್ರಮೋದ್ ಕುಮಾರ್ ಜೋಶಿ, ಕೃಷಿ ಆರ್ಥಿಕ ತಜ್ಞ ಹಾಗೂ ಕೃಷಿ ವೆಚ್ಚ ಹಾಗೂ ದರಗಳ ಆಯೋಗದ ಮಾಜಿ ಅಧ್ಯಕ್ಷ ಅಶೋಕ್ ಗುಲಾಟಿ, ಶೇತ್ಕಾರಿ ಸಂಘಟನೆಯ ಮುಖ್ಯಸ್ಥ ಅನಿಲ್ ಘನ್ವಾತ್ ಅವರಿದ್ದಾರೆ. ಇವರೆಲ್ಲರೂ ಮಾಧ್ಯಮದಲ್ಲಿ ಕೃಷಿ ಕಾನೂನುಗಳನ್ನು ಬೆಂಬಲಿಸಿ ಹಲವು ಲೇಖನಗಳನ್ನು ಬರೆದಿದ್ದಾರೆ.
ಗುಲಾಟಿ ಕೃಷಿ ಕಾನೂನುಗಳನ್ನು ಬೆಂಬಲಿಸಿ ಮಾಧ್ಯಮಗಳಲ್ಲಿ ಮಾತನಾಡಿದ್ದಾರೆ.
ಸುಪ್ರೀಂಕೋರ್ಟ್ ರಚಿಸಿರುವ ಸಮಿತಿಯು 10 ದಿನಗಳಲ್ಲಿ ಮೊದಲ ಸಭೆ ನಡೆಸಿ ಇನ್ನು 2 ತಿಂಗಳುಗಳಲ್ಲಿ ವರದಿಯನ್ನು ಸಲ್ಲಿಸಬೇಕಾಗಿದೆ.







