ಸುಪ್ರೀಂಕೋರ್ಟ್ ಸಮಿತಿಯನ್ನು ತಿರಸ್ಕರಿಸಿದ ರೈತ ಸಂಘಟನೆಗಳು
ಸದಸ್ಯರೆಲ್ಲರೂ ಕೃಷಿ ಕಾಯ್ದೆ ಪರವಾಗಿದ್ದಾರೆ ಎಂದು ಆರೋಪಿಸಿದ ಅನ್ನದಾತರು

ಹೊಸದಿಲ್ಲಿ: ಮೂರು ವಿವಾದಾತ್ಮಕ ಕೃಷಿ ಕಾನೂನುಗಳಿಗೆ ತಾತ್ಕಾಲಿಕ ತಡೆ ಹಾಗೂ ಸಮಸ್ಯೆ ಪರಿಹಾರಕ್ಕೆ ಸಮಿತಿಯನ್ನು ನೇಮಿಸಿ ಸುಪ್ರೀಂಕೋರ್ಟ್ ನೀಡಿರುವ ಆದೇಶದ ಕೆಲವೇ ಗಂಟೆಗಳ ಬಳಿಕ ಪ್ರತಿಕ್ರಿಯಿಸಿರುವ ಪ್ರತಿಭಟನಾನಿರತ ರೈತರುಗಳು, ಆದೇಶದ ಅರ್ಧಾಂಶವನ್ನು ಸ್ವಾಗತಿಸಿದರೆ, ಇನ್ನುಳಿದ ನಿರ್ಧಾರವನ್ನು ತಿರಸ್ಕರಿಸಿದರು.
ನಾವು ಈ ಕುರಿತು ಚರ್ಚೆ ನಡೆಸಿಲ್ಲ. ಸಮಿತಿಯನ್ನು ಒಪ್ಪಿಕೊಂಡಿಲ್ಲ. ಸಮಿತಿಯಲ್ಲಿ ಸೇರಿಸಿಕೊಂಡಿರುವ ಸದಸ್ಯರುಗಳು ಕೃಷಿ ಕಾನೂನುಗಳ ಪರವಾಗಿದ್ದವರು ಎಂದು ಹೇಳಿದ್ದಾರೆ.
“ನಾವು ಈ ಸಮಿತಿಯನ್ನು ಒಪ್ಪಿಕೊಳ್ಳುವುದಿಲ್ಲ. ಈ ಸಮಿತಿಯ ಎಲ್ಲ ಸದಸ್ಯರುಗಳು ಸರಕಾರದ ಬೆಂಬಲಿಗರು. ಇವೆರೆಲ್ಲರೂ ಸರಕಾರದ ಕೃಷಿ ಕಾನೂನುಗಳನ್ನು ಸಮರ್ಥಿಸಿಕೊಂಡಿದ್ದಾರೆ. ನಾವು ದೇಶವ್ಯಾಪಿ ಪ್ರತಿಭಟನೆ ನಡೆಸುವುದಾಗಿ ಪಂಜಾಬ್ ರೈತರುಗಳು ಸಂಘಟನೆಗಳು ಹೇಳಿವೆ.
ಕೇಂದ್ರ ಸರಕಾರವು ಸುಪ್ರೀಂಕೋರ್ಟಿನ ಮುಖಾಂತರ ಈ ಸಮಿತಿಯನ್ನು ತಂದಿದೆ ಎಂದು ನಾವು ಭಾವಿಸಿದ್ದೇವೆ. ವಿಷಯವನ್ನು ಬೇರತ್ತ ತಿರುಗಿಸಲು ಈ ಸಮಿತಿ ರಚಿಸಲಾಗಿದೆ. ಸಮಿತಿಯನ್ನು ಬದಲಾಯಿಸಿದರೂ, ನಾವು ಆ ಸಮಿತಿಯೊಂದಿಗೆ ಚರ್ಚಿಸುವುದಿಲ್ಲ ಎಂದು ಸಂಘಟನೆಗಳು ಹೇಳಿವೆ.





