ರಸ್ತೆ ಬದಿ ನಿಂತಿದ್ದ ನಿರ್ಗತಿಕನ ಮೇಲೆ ಆಟೋ ಹತ್ತಿಸಿದ ಚಾಲಕ: ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ

ಮೈಸೂರು,ಜ.12: ಆಟೋ ಚಾಲಕನೊಬ್ಬ ರಸ್ತೆ ಬದಿ ನಿಂತಿದ್ದ ನಿರ್ಗತಿಕನ ಮೇಲೆ ಆಟೋ ಹತ್ತಿಸಿದ ಘಟನೆ ನಗರದ ಗಾಂಧಿ ನಗರದಲ್ಲಿ ನಡೆದಿದ್ದು, ಘಟನೆಯ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಗಾಂಧಿ ನಗರದ 4 ನೇ ಕ್ರಾಸ್ ನಲ್ಲಿ ಈ ಅಮಾನೀಯವಾಗಿ ಘಟನೆ ನಡೆದಿದ್ದು, ರಸ್ತೆ ತಿರುವಿನಲ್ಲಿ ನಿಂತಿದ್ದ ನಿರ್ಗತಿಕನ ಮೇಲೆ ಆಟೋ ಹತ್ತಿಸಿದ ಆಟೋ ಚಾಲಕ ಆತನನ್ನು ಕೊಲೆ ಮಾಡಲು ಯತ್ನಿಸಿದ್ದಾನೆ ಎನ್ನಲಾಗಿದೆ. ಮೊದಲು ಒಂದು ಬಾರಿ ನಿರ್ಗತಿಕನ ಮೇಲೆ ಆಟೋ ಹತ್ತಿಸಿಕೊಂಡು ಹೋದ ಚಾಲಕ, ಸ್ವಲ್ಪ ದೂರ ಹೋಗಿ ಆಟೋ ತಿರುಗಿಸಿಕೊಂಡು ಬಂದು, ಕೆಳಗೆ ಬಿದ್ದು ಒದ್ದಾಡುತ್ತಿದ್ದ ನಿರ್ಗತಿಕನ ಮೇಲೆ ಪುನಃ ಆಟೋ ಹತ್ತಿಸಿದ್ದಾನೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ನಿರ್ಗತಿಕನನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ. ನಿರ್ಗತಿಕ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಸ್ಥಿತಿ ಗಂಭೀರವಾಗಿದೆ.
ಆಟೋ ಚಾಲಕನ ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆ ಆಗಿದ್ದು, ಘಟನೆ ಸಂಬಂಧ ಎನ್.ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಟೋ ಡ್ರೈವರ್ ಯಾರು? ಯಾಕಾಗಿ ಈ ರೀತಿ ಮಾಡಿದ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.





