ಉಡುಪಿ: ಜ.16ಕ್ಕೆ ಮುಜರಾಯಿ ಇಲಾಖಾ ವ್ಯಾಪ್ತಿ ದೇವಾಲಯಗಳ ಅರ್ಚಕರ ಜಿಲ್ಲಾ ಸಮಾವೇಶ
ಉಡುಪಿ, ಜ13: ಉಡುಪಿ ಜಿಲ್ಲಾ ಮುಜರಾಯಿ ಇಲಾಖಾ ದೇವಾಲಯ ಗಳ ಅರ್ಚಕರ ಸಂಘದ ವತಿಯಿಂದ ಉಡುಪಿ ಜಿಲ್ಲಾ ಮುಜರಾಯಿ ಇಲಾಖಾ ವ್ಯಾಪ್ತಿಯ ದೇವಾಲಯಗಳ ಅರ್ಚಕರ ಸಮಾವೇಶ ಜ.16ರ ಶನಿವಾರ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ.
ಉಡುಪಿ ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯರಾದ ಹರಿಪ್ರಸಾದ್ ಭಟ್ ಅವರು ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 810 ದೇವಾಲಯಗಳು ಇಲಾಖಾ ವ್ಯಾಪ್ತಿಗೆ ಬರುತಿದ್ದು, ಇವುಗಲಲ್ಲಿ 25 ಎ ದರ್ಜೆಯ ದೇವಾಲಯಗಳಾದರೆ, 18 ಬಿ ಗ್ರೇಡ್ ಹಾಗೂ ಉಳಿದ 767 ಸಿ ಗ್ರೇಡ್ ದೇವಾಲಯಗಳಾಗಿವೆ ಎಂದವರು ತಿಳಿಸಿದರು.
ಮುಜರಾಯಿ ಇಲಾಖಾ ವ್ಯಾಪ್ತಿಯ ದೇವಾಲಯಗಳ ಅದರಲ್ಲೂ ಸಿ ಗ್ರೇಡ್ ದೇವಾಲಯಗಳ ಅರ್ಚಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಗಮನ ಸಮಾಜದ ಸೆಳೆಯಲಾಗುವುದು ಎಂದರು.
ಜ. 16ರಂದು ಬೆಳಗ್ಗೆ 10:15ಕ್ಕೆ ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥರು ಸಮಾವೇಶವನ್ನು ಉದ್ಘಾಟಿ ಸುವರು. ಅದಮಾರು ಹಿರಿಯ ಯತಿಗಳಾದ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡುವರು. ರಾಜ್ಯ ಧಾರ್ಮಿಕ ದತ್ತಿ ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಜಿಲ್ಲೆಯ ಎಲ್ಲಾ ಶಾಸಕರು, ಜಿಲ್ಲಾಧಿಕಾರಿ ಜಿ.ಜಗದೀಶ್, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಆರ್.ಶೇಷಪ್ಪ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಸೂರ್ಯನಾರಾಯಣ ಭಟ್ ಕಶೆಕೋಡಿ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ, ಮಣಿಪಾಲ ಎಂಐಟಿ ಪ್ರಾಧ್ಯಾಪಕ ಡಾ.ನಾರಾಯಣ ಶೆಣೈ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
11:30ರಿಂದ ವೇದಮೂರ್ತಿ ದೇವಿಪ್ರಸಾದ್ ತಂತ್ರಿ ಸೂರಾಲು ಹಾಗೂ ಅಪಧಾನಿ ಸುಬ್ರಹ್ಮಣ್ಯ ಭಟ್ ಗುಂಡಿಬೈಲು ಇವರು ದೇವಾಲಯಗಳಿಗೆ ಸಂಬಂಧಿಸಿದಂತೆ ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರೆ, ಅಪರಾಹ್ನ 12:30ಕ್ಕೆ ಮಣಿಪಾಲ ಮುನಿಯಾಲು ಆರ್ಯುವೇದ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಡಿ.ಗುರುರಾಜ ತಂತ್ರಿ ಉಪಯುಕ್ತ ಆರೋಗ್ಯ ಮಾಹಿತಿ ನೀಡಲಿದ್ದಾರೆ ಎಂದು ಧಾರ್ಮಿಕ ಪರಿಷತ್ ಶ್ರೀರಾಮ ಭಟ್ ಸಾಣೂರು ತಿಳಿಸಿದರು.
ಧಾರ್ಮಿಕ ಪರಿಷತ್‌ನ ಸದಸ್ಯರಾದ ರಮಾಕಾಂತ ದೇವಾಡಿಗ ಪಡುಬಿದ್ರಿ, ಸುನೀಲ್ ಕೆ.ಆರ್. ಕಾರ್ಕಳ ಹಾಗೂ ವಾಸುದೇವ ಹಂಗಾರಕಟ್ಟೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.







