ಕುಣಿಗಲ್ ಬಳಿ ಅಪಘಾತ : ಕುಂಬ್ರದ ಯುವಕ ಮೃತ್ಯು
ಪುತ್ತೂರು : ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕುಣಿಗಲ್ ಬಳಿಯಲ್ಲಿ ಬುಧವಾರ ನಡೆದ ಬೈಕ್ ಅಪಘಾತದಲ್ಲಿ ಪುತ್ತೂರು ತಾಲೂಕಿನ ಕುಂಬ್ರ ಸಮೀಪದ ಗಟ್ಟಮನೆ ನಿವಾಸಿ ಯುವಕನೊಬ್ಬ ಮೃತಪಟ್ಟಿದ್ದು, ಬೈಕ್‍ನಲ್ಲಿದ್ದ ಸಹಸವಾರ ಗಂಭೀರ ಗಾಯಗೊಂಡಿದ್ದಾರೆ.
ಗಟ್ಟಮನೆ ನಿವಾಸಿ ಆಲಿಕುಂಞಿ ಎಂಬವರ ಪುತ್ರ ಬಿಲಾಲ್ (20) ಮೃತಪಟ್ಟ ಯುವಕ. ಆತನ ಸ್ನೇಹಿತ ಸರಫುದ್ದೀನ್ (21)ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬಿಲಾಲ್ ಹಾಗೂ ಸರಫುದ್ದೀನ್ ಮಂಗಳವಾರ ರಾತ್ರಿ ಡ್ಯೂಕ್ ಬೈಕ್‍ನಲ್ಲಿ ಪುತ್ತೂರಿನಿಂದ ಬೆಂಗಳೂರಿಗೆ ತೆರಳಿದ್ದರು ಎನ್ನಲಾಗಿದೆ. ಬಿಲಾಲ್ ಅವರು ಚಲಾಯಿಸುತ್ತಿದ್ದ ಬೈಕ್ ರಸ್ತೆ ಡಿವೈಡರ್ ಗೆ ಢಿಕ್ಕಿ ಹೊಡೆದು ಸವಾರರಿಬ್ಬರೂ ರಸ್ತೆಗೆಸೆಯಲ್ಪಟ್ಟು ಗಾಯಗೊಂಡಿದ್ದರು ಎಂದು ತಿಳದುಬಂದಿದೆ.
ಗಾಯಾಳುಗಳನ್ನು ನೆಲಮಂಗಲ ಆಸ್ಪತ್ರೆಗೆ ಸಾಗಿಸಲಾಗಿತ್ತು. ಈ ನಡುವೆ ದಾರಿ ಮಧ್ಯೆ ಬಿಲಾಲ್ ಅವರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಸರಫುದ್ದೀನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Next Story