ಉದ್ಯೋಗ ಕೊಡಿಸುವ ನೆಪದಲ್ಲಿ ಲಕ್ಷಾಂತರ ರೂ. ವಂಚನೆ: ಪ್ರಕರಣ ದಾಖಲು

ಬೆಂಗಳೂರು, ಜ.14: ಯುವಕರಿಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ, ವಂಚನೆ ಮಾಡುತ್ತಿದ್ದ ಆರೋಪದಡಿ ಓರ್ವನ ವಿರುದ್ಧ ಇಲ್ಲಿನ ಕಾಡುಗೋಡಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸ್ವರೂಪ್ ಶೆಟ್ಟಿ ಎಂಬಾತನ ವಿರುದ್ಧ ದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೂರಿನಲ್ಲಿ ಏನಿದೆ?: ಖಾಸಗಿ ಹೊಟೇಲ್‍ನಲ್ಲಿ ಕೆಲಸ ಮಾಡುತ್ತಿದ್ದ ಕಿರಣ್ ಎಂಬುವರು ಹಿಂದಿನ ವಾರ್ಷಿಕ ಸಾಲಿನ ಮಾರ್ಚ್ ನಲ್ಲಿ ಸ್ವರೂಪ್ ಶೆಟ್ಟಿ ಪರಿಚಯವಾಗಿದ್ದ. ಈ ವೇಳೆ ಕಿರಣ್ ತನ್ನ ಸಹೋದರನಿಗೆ ಕೆಲಸ ಕೊಡಿಸುವಂತೆ ನಿವೇದಿಸಿಕೊಂಡಿದ್ದ.
ಬಳಿಕ, ತಾನೊಬ್ಬ ಶ್ರೀಮಂತ ವ್ಯಕ್ತಿಯಾಗಿದ್ದು ಐಟಿ ಇಲಾಖೆ ದಾಳಿ ಮಾಡಿದ್ದು ಬ್ಯಾಂಕ್ ಅಕೌಂಟ್ ಜಪ್ತಿಯಾಗಿದೆ. ನೀವು ಹಣದ ಸಹಾಯ ಮಾಡಬೇಕೆಂದು ಮೊದಲ ಹಂತದಲ್ಲಿ ಸ್ನೇಹಿತನ ಅಕೌಂಟ್‍ಗೆ 2.40 ಲಕ್ಷ ರೂ. ಕಿರಣ್‍ನಿಂದ ಸ್ವರೂಪ್ ಪಡೆದುಕೊಂಡಿದ್ದ. ತದನಂತರ ಹಂತ ಹಂತವಾಗಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 28.70 ಲಕ್ಷ ತೆಗೆದುಕೊಂಡು ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಹಿಂದೆ ಹಾವೇರಿ ಮೂಲದ ಆರ್ಶದ್ ಎಂಬ ಯುವಕನನ್ನು ಅಕ್ರಮ ಬಂಧನದಲ್ಲಿರಿಸಿಕೊಂಡು 48 ಲಕ್ಷ ರೂ. ಪಡೆದ ಪ್ರಕರಣಕ್ಕೆ ಸಂಬಂಧಿಸಿ ಕಾಡುಗೋಡಿ ಪೊಲೀಸರು ಸ್ವರೂಪ್ ಅನ್ನು ಬಂಧಿಸಿದ್ದರು. ಸದ್ಯ ವಂಚನೆ ಪ್ರಕರಣ ಸಂಬಂಧ ಸ್ವರೂಪ್‍ನನ್ನು ಪುಣೆ ಪೊಲೀಸರು ಬಾಡಿವಾರಂಟ್ ಮೂಲಕ ವಶಕ್ಕೆ ಪಡೆದಿದ್ದಾರೆ.







