ಉಡುಪಿ: ಪರ್ಯಾಯದ ಪಂಚಶತಮಾನೋತ್ಸವ ಸಂಭ್ರಮಕ್ಕೆ ಚಾಲನೆ
ಉಡುಪಿ, ಜ.16: ಸೋದೆ ಮಠದ ಶ್ರೀವಾದಿರಾಜರಿಂದ 1522ರ ಜ.18ರಂದು ಪ್ರಾರಂಭಗೊಂಡ ದ್ವೈವಾರ್ಷಿಕ ಪರ್ಯಾಯದ ಪಂಚ ಶತಮಾನೋತ್ಸವ ಕಾರ್ಯಕ್ರಮಕ್ಕೆ ಇಂದು ಸಂಜೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದ ಶ್ರೀನರಹರಿ ತೀರ್ಥ ವೇದಿಕೆ ಯಲ್ಲಿ ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥರು ಚಾಲನೆ ನೀಡಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ, ಕಿರಿಯ ಯತಿಗಳಾದ ಶ್ರೀವಿದ್ಯಾ ರಾಜೇಶ್ವರ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು. ‘ಶ್ರೀವಾದಿರಾಜ ಶ್ರೀಪಾದರು’ ವಿಷಯದ ಕುರಿತು ವಿದ್ವಾಂಸ ಉದಯಕುಮಾರ್ ಸರಳಾಯ ವಿಶೇಷ ಉಪನ್ಯಾಸ ನೀಡಿದರು.
ಕರ್ಣಾಟಕ ಬ್ಯಾಂಕಿನ ಅಧ್ಯಕ್ಷ ಹಗೂ ಆಡಳಿತ ನಿರ್ದೇಶಕ ಎಂ.ಎಸ್. ಮಹಾಬಲೇಶ್ವರ ರಾವ್, ಕಟೀಲಿನ ಅನುವಂಶಿಕ ಮೊಕತೇಸರ ಹಾಗೂ ಅರ್ಚಕ ವಾಸುದೇವ ಅಸ್ರಣ್ಣ, ಹರಿನಾರಾಯಣದಾಸ ಅಸ್ರಣ್ಮ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮೊದಲ ದಿನದಂದು ವಿವಿಧ ಕ್ಷೇತ್ರಗಳ ಸಾಧಕರಾದ ಕಬ್ಯಾಡಿ ಜಯರಾಮ ಆಚಾರ್ಯ, ನಾರಾಯಣ ಶೆಣೈ, ಗಣೇಶ್‌ರಾವ್, ಶ್ರೀಪತಿ ಭಟ್ ಗುಂಡಿಬೈಲು, ರಾಘವೇಂದ್ರ ಆಚಾರ್ಯ ಬಜ್ಪೆ, ಗಿರಿ ಬಳಗ ಕುಂಜಾರುಗಿರಿ, ವಿವೇಕಾನಂದ ಯುವ ವೇದಿಕೆ ಚಾರ ಹೆಬ್ರಿ, ಶಾಂತಿನಿಕೇತನ ಯುವವೃಂದ ಕುಚ್ಚೂರು, ರಾಜಸ್ಥಾನಿ ಸಮಾಜ ಬಾಂಧವರನ್ನು ಸಮ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ರಾಜಾಂಗಣದಲ್ಲಿ ಆಯೋಜಿಸಿರುವ ರಾಷ್ಟ್ರಮಟ್ಟದ ಗ್ರಾಮೀಣ ಉತ್ಪನ್ನಗಳ ಮೇಳ ಹಾಗೂ ಮಾರಾಟ ಮತ್ತು ತುಳುನಾಡ ಪಾರಂಪರಿಕ ಪರಿಕರಗಳ ಪ್ರದರ್ಶನವನ್ನು ಪರ್ಯಾಯ ಅದಮಾರುಶ್ರೀಗಳು ಉದ್ಘಾಟಿಸಿದರು.
ಪರ್ಯಾಯದ ಪಂಚಶತಮಾನೋತ್ಸವದ ಅಂಗವಾಗಿ ಇಂದಿನಿಂದ ಜ.23 ರವರೆಗೆ ವೈವಿಧ್ಯಮಯ ಧಾರ್ಮಿಕ, ಉಪನ್ಯಾಸ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.