ಜ.18 ರಂದು ಮುಖ್ಯಮಂತ್ರಿಯಿಂದ ಶ್ರೀಕೃಷ್ಣ ಮಠದ ವಿಶ್ವಪಥ ಉದ್ಘಾಟನೆ
ಉಡುಪಿ, ಜ.17: ಉಡುಪಿ ಶ್ರೀಕೃಷ್ಣ ಮಠ ಪರ್ಯಾಯ ಅದಮಾರು ಮಠದ ವತಿಯಿಂದ ಪರ್ಯಾಯ ಪಂಚ ಶತಮಾನೋತ್ಸ ವದ ಪ್ರಯುಕ್ತ ಜ.18 ರಂದು ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾಗವಹಿಸಲಿದ್ದು, ಇದೇ ಸಂದರ್ಭದಲ್ಲಿ ದೇವರ ದರ್ಶನಕ್ಕೆ ಭಕ್ತರು ಹೋಗಲು ನೂತನವಾಗಿ ನಿರ್ಮಿಸಿದ ವಿಶ್ವಪಥ ಸರತಿ ಸಾಲನ್ನು ಉದ್ಘಾಟಿಸಲಿದ್ದಾರೆ ಎಂದು ಮಠದ ವ್ಯವಸ್ಥಾಪಕ ಗೋವಿಂದರಾಜ್ ತಿಳಿಸಿದ್ದಾರೆ.
ಮಠದಲ್ಲಿಂದು ಕರೆದ ಮಾತನಾಡಿದ ಅವರು, ಸಂಜೆ 5 ಗಂಟೆಗೆ ಮಠಕ್ಕೆ ಆಗಮಿಸಲಿರುವರ ಮುಖ್ಯಮಂತ್ರಿ, ವಿಶ್ವಪಥವನ್ನು ಉದ್ಘಾಟಿಸಿ, ಸಂಜೆ 5.15ಕ್ಕೆ ದೇವರ ದರ್ಶನ, ಉಡುಪಿ ಸಾವಯವ ಮಳಿಗೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಬಳಿಕ 5.30ಕ್ಕೆ ರಾಜಾಂಗಣದಲ್ಲಿ ನಡೆಯುವ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಇದಕ್ಕೂ ಮುನ್ನ ಸಂಜೆ 3.30ಕ್ಕೆ ಪರ್ಯಾಯ ಮಹೋತ್ಸವದ 500 ವರ್ಷದ ನೆನಪಿಗಾಗಿ ಪರ್ಯಾಯ ಮೆರವಣಿಗೆಯಂತೆ ಜೋಡುಕಟ್ಟೆಯಿಂದ ಭವ್ಯ ಮೆರವಣಿಗೆ ನಡೆಯಲಿದೆ. ಶೋಭಾಯಾತ್ರೆ ಡಯಾನಾ ಸರ್ಕಲ್, ಐಡಿಯಲ್ ಸರ್ಕಲ್, ತೆಂಕುಪೇಟೆ ಮಾರ್ಗವಾಗಿ ರಥಬೀದಿಗೆ ಪ್ರವೇಶಿಸಲಿದೆ. ಹಲವು ಕಲಾ ತಂಡಗಳು ಇದರಲ್ಲಿ ಭಾಗವಹಿಸಲಿವೆ. ಮೆರವಣಿಗೆಗೆ ಯೂನಿಯನ್ ಬ್ಯಾಂಕ್ ಎಂ.ಡಿ ಹಾಗೂ ಸಿಇಒ ರಾಜಕಿರಣ್ ರೈ, ಉದ್ಯಮಿ ಪಿ.ಪ್ರಭಾಕರ ಶೆಟ್ಟಿ ಚಾಲನೆ ನೀಡಲಿದ್ದಾರೆ.
ರಾಜಾಂಗಣದಲ್ಲಿ ನಡೆಯುವ ಮುಖ್ಯ ಮಂತ್ರಿ ಕಾರ್ಯಕ್ರಮಕ್ಕೆ ಶ್ರೀಕೃಷ್ಣ ದರ್ಶನದ ಸುದರ್ಶನ ಪಾಸ್ ಪಡೆದುಕೊಂಡಿರುವ ಭಕ್ತರಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು. ಕಾರ್ಯಕ್ರಮದಲ್ಲಿ 500 ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಅವರು ಮಾಹಿತಿ ನೀಡಿದರು.
ಶ್ರೀಕೃಷ್ಣ ಮಠದ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಶ ಭಟ್ ಕಡೆಕಾರ್, ಶ್ರೀಕೃಷ್ಣ ಸೇವಾ ಬಳಗದ ಸಂಚಾಲಕ ವೈ.ಎನ್. ರಾಮಚಂದ್ರ ರಾವ್, ಸಂತೋಷ್ ಕುಮಾರ್, ಪುರುಷೋತ್ತಮ್ ಅಡ್ವೆ ಉಪಸ್ಥಿತರಿದ್ದರು







