ಪಡುಕೆರೆ ಮರೀನಾ ಸಾಧ್ಯತಾ ಪ್ರಮಾಣ ಪತ್ರಕ್ಕಾಗಿ ಸಿಡಬ್ಲುಪಿಆರ್‌ಎಸ್ ಜೊತೆ ಚರ್ಚೆ: ರಘುಪತಿ ಭಟ್
ಉಡುಪಿ, ಜ.17: ಮಲ್ಪೆ ಪಡುಕೆರೆಯಲ್ಲಿ ಕೇಂದ್ರ ಸರಕಾರದ ಸಾಗರ ಮಾಲ ಯೋಜನೆಯ ಮೂಲಕ ನಿರ್ಮಿಸಲು ಉದ್ದೇಶಿಸಿ ರುವ ಮರೀನಾಕ್ಕೆ 800 ಕೋಟಿ ರೂ. ತೆಗೆದಿರಲಾಗಿದ್ದು, ಇದರ ಸಾಧ್ಯತಾ ಪ್ರಮಾಣ ಪತ್ರಕ್ಕಾಗಿ ಅಧ್ಯ ಯನ ನಡೆಸಲು ಕೇಂದ್ರ ಸರಕಾರದ ಅಧೀನದಲ್ಲಿರುವ ಪುಣೆಯ ಸೆಂಟ್ರಲ್ ವಾಟರ್ ಆ್ಯಂಡ್ ಫವರ್ ರಿಸೋಸ್ ಸೆಂಟರ್ ಸರ್ವಿಸಸ್(ಸಿಡಬ್ಲುಪಿ ಆರ್‌ಎಸ್) ಜೊತೆ ಚರ್ಚಿಸಲಾಗಿದೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಮರೀನಾ ಯೋಜನೆಗೆ ಕೇಂದ್ರ ಸರಕಾರ ಹಣ ಮಂಜೂರು ಮಾಡಿ, ಸರ್ವೆ ಮಾಡುವ ಬದಲು, ಸಿಎಂ ಜೊತೆ ಮಾತನಾಡಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ದಿಂದ ಒಂದು ಕೋಟಿ ಅನುದಾನದೊಂದಿಗೆ ಅದರ ಸಾಧಕ ಬಾಧಕ ಅಧ್ಯಯನ ನಡೆಸುವ ಬಗ್ಗೆ ನಿರ್ಧಾರ ಮಾಡಲಾಗಿದೆ. ಅದರಂತೆ ತಿಂಗಳ ಹಿಂದೆ ನಾನು ಮತ್ತು ಪ್ರಾಧಿಕಾರದ ಅಧ್ಯಕ್ಷರು ಪುಣೆಗೆ ತೆರಳಿ ಸಂಸ್ಥೆಯವರೊಂದಿಗೆ ಚರ್ಚಿಸಿ ಬಂದಿದ್ದೇವೆ. ಅವರಿಗೆ ಪ್ರಾಥಮಿಕ ವಾಗಿ 71ಲಕ್ಷ ರೂ. ನೀಡಬೇಕಾಗಿದೆ. ಬಳಿಕ ಸಾಧ್ಯತಾ ಪ್ರಮಾಣ ನೀಡಲು ಸುಮಾರು 8-10 ತಿಂಗಳು ಕಾಲಾವಕಾಶ ಬೇಕಾಗುತ್ತದೆ ಎಂದರು.
ಆದರೆ ಈ ಯೋಜನೆಗೆ ಪಡುಕೆರೆ ಭಾಗದ ಮೀನುಗಾರರು ವಿರೋಧ ಮಾಡುತ್ತಿದ್ದಾರೆ. ನಾವು ಅಧ್ಯಯನ ಮಾಡದೆ ಈ ಯೋಜನೆ ಬೇಕೆ ಬೇಡವೇ ಎಂಬುದು ನಿರ್ಧರಿಸಲು ಆಗುವುದಿಲ್ಲ. ಮೀನುಗಾರರಿಗೆ ತೊಂದರೆ ಇಲ್ಲದಿ ದ್ದರೆ ಮಾತ್ರ ಇದನ್ನು ಅನುಷ್ಠಾನಕ್ಕೆ ತರಲಾಗುವುದು ಎಂದ ಅವರು, ಇದು ಬಹಳ ಒಳ್ಳೆಯ ಯೋಜನೆಯಾಗಿದೆ. ಭಾರತ ದೇಶದಲ್ಲಿ ಎಲ್ಲಿಯೂ ಇಂತಹ ಮರೀನಾ ಇಲ್ಲ. ಇದು ವಿದೇಶಿ ಯಾಚ್ ಮತ್ತು ಬೋಟುಗಳಿಗೆ ಪಾರ್ಕಿಂಗ್, ದುರಸ್ತಿ ಹಾಗೂ ಶಾಪಿಂಗ್ ಮಾಡಲು ತಂಗುದಾಣ ಆಗಿರುತ್ತದೆ. ಇದು ಕೇವಲ ಐದು ಮೀಟರ್ ಆಳ ಇರುವುದರಿಂದ ಇಲ್ಲಿ ದೊಡ್ಡ ಬೋಟು ಬರು ವುದಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.
ಪಡುಕೆರೆ ಪ್ರದೇಶದಲ್ಲಿ ಮೂರು ದ್ವೀಪಗಳು ಒಟ್ಟಿಗೆ ಇರುವುದರಿಂದ ಮರೀನಾ ಮಾಡಲು ಈ ಜಾಗವನ್ನು ಆಯ್ಕೆ ಮಾಡಲಾಗಿದೆ. ಆದರೆ ಈ ಮೂರರ ಪೈಕಿ ಎರಡು ದ್ವೀಪಗಳನ್ನು ಮಾತ್ರ ಮರೀನಾಕ್ಕೆ ಬಳಸಿಕೊಳ್ಳಲಾಗು ತ್ತದೆ. ಅದೇ ರೀತಿ ಒಂದು ದ್ವೀಪಕ್ಕೆ ಬ್ರೇಕ್‌ವಾಟರ್ ಕಂ ರಸ್ತೆಯನ್ನು ನಿರ್ಮಿಸ ಲಾಗುತ್ತದೆ. ಇದರಿಂದ ಆ ದ್ವೀಪಕ್ಕೆ ಸುಲಭವಾಗಿ ಹೋಗಲು ರಸ್ತೆ ಮಾಡಿ ದಂತಾಗು ತ್ತದೆ. ಅಲ್ಲದೆ ಬ್ರೇಕ್ ವಾಟರ್‌ನಿಂದ ಪಡುಕೆರೆಯ ನಾಲ್ಕೈದು ಕಿ.ಮೀ.ವರೆಗೆ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಕೂಡ ದೊರೆಯು ತ್ತದೆ ಎಂದು ಅವರು ಮಾಹಿತಿ ನೀಡಿದರು.
ಮರೀನಾ ಯೋಜನೆ ಬಗ್ಗೆ ಅಧ್ಯಯನ ವರದಿ ಬಂದ ಬಳಿಕ, ಅದರ ಸಾಧಕ ಬಾಧಕಗಳ ಬಗ್ಗೆ ಮೀನುಗಾರರೊಂದಿಗೆ ಚರ್ಚಿಸ ಲಾಗುವುದು. ಅಲ್ಲದೆ ವಿಜ್ಞಾನಿಗಳನ್ನು ಕರೆಸಿ ಮೀನುಗಾರರ ಸಂಶಯ ನಿವಾರಿಸಲಾಗುವುದು. ಈ ಯೋಜನೆ ಬಂದರೆ ಪಡುಕೆರೆ, ಮಲ್ಪೆ, ಉಡುಪಿಯಲ್ಲಿ ಬಹಳ ದೊಡ್ಡ ಆರ್ಥಿಕ ಬದಲಾವಣೆ ಆಗುತ್ತದೆ. ಹಲವು ಮಂದಿ ಉದ್ಯೋಗ ದೊರೆಯಲಿದೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದರು.