ಟ್ರಂಪ್ ಆಡಳಿತ ಅವಧಿಯಲ್ಲಿ 13 ಮಂದಿಗೆ ಮರಣದಂಡನೆ

ವಾಶಿಂಗ್ಟನ್,ಜ.17: ಅಧಿಕಾರದಿಂದ ನಿರ್ಗಮಿಸುವ 5 ದಿನಗಳ ಮೊದಲು, ಶನಿವಾರದಂದು ಡೊನಾಲ್ಡ್ ಟ್ರಂಪ್ ಆಡಳಿತವು ತನ್ನ ಅವಧಿಯಲ್ಲಿನ 13ನೇ ಹಾಗೂ ಕೊನೆಯ ಮರಣದಂಡನೆಯನ್ನು ಜಾರಿಗೊಳಿಸಿದೆ. 1996ರಲ್ಲಿ ಮೇರಿಲ್ಯಾಂಡ್‌ನ ವನ್ಯಜೀವಿ ಆಭಯಾರಣ್ಯವೊಂದರಲ್ಲಿ ಮೂವರು ಮಹಿಳೆಯರ ಹತ್ಯೆ ಪ್ರಕರಣದಲ್ಲಿ ದೋಷಿಯಾಗಿದ್ದ 46 ವರ್ಷದ ಕರಿಯ ಜನಾಂಗೀಯ ಡಸ್ಟಿನ್ ಹಿಗ್ಗಿಸ್ ನನ್ನು ಇಂಡಿಯಾನ ಪೊಲೀಸ್‌ನ ಟೆರೆ ಹೋಡ್ ಜೈಲಿನಲ್ಲಿ ವಿಷದ ಇಂಜೆಕ್ಷನ್ ಚುಚ್ಚಿ ಕೊಲ್ಲಲಾಯಿತು.
1992ರಲ್ಲಿ ವರ್ಜಿನಿಯಾದಲ್ಲಿ ನಡೆದ ಹಿಂಸಾಚಾರವೊಂದರಲ್ಲಿ ಏಳು ಮಂದಿಯನ್ನು ಹತ್ಯೆಗೈದ ಮಾದಕದ್ರವ್ಯ ಕಳ್ಳಸಾಗಣೆದಾರ ಕೋರಿಜಾನ್ಸನ್‌ನನ್ನು ಗುರುವಾರದಂದು ವಿಷದ ಇಂಜೆಕ್ಷನ್ ನೀಡಿ ವಧಿಸಲಾಗಿತ್ತು. ಇದಾದ ಎರಡನೆ ದಿನದಲ್ಲಿ ಡಸ್ಟಿನ್ ಹಿಗ್ಗಿಸ್‌ಗೂ ಮರಣಂಡನೆ ನೀಡಲಾಗಿದೆ. ಸುಮಾರು 17 ವರ್ಷದ ದೀರ್ಘ ಅಂತರದ ಬಳಿಕ ಡೊನಾಲ್ಡ್ ಟ್ರಂಪ್ ಆಡಳಿತವು ಮರಣದಂಡನೆಯನ್ನು ಕಳೆದ ವರ್ಷದಿಂದ ಮರುಜಾರಿಗೆ ತಂದಿತ್ತು. ಬುಧವಾರದಂದು ಲೀಸಾ ಮೊಂಟೆಗೊಮರಿ ಎಂಬಾಕೆಗೆ ಮರಣದಂಡನೆ ನೀಡಲಾಗಿತ್ತು. ಸುಮಾರು 70 ವರ್ಷಗಳ ಬಳಿಕ ಮಹಿಳೆಯೊಬ್ಬಳಿಗೆ ಮರಣದಂಡನೆಯನ್ನು ಜಾರಿಗೊಳಿಸಿರುವುದು ಇದೇ ಮೊದಲು.
ಅಮೆರಿಕದಲ್ಲಿ ಇನ್ನೂ 50 ಮಂದಿ ಮರಣದಂಡನೆ ಎದುರಿಸುತ್ತಿದ್ದು, ಅವರಲ್ಲಿ ಕೆಲವರು ಕ್ಷಮಾದಾನಕ್ಕಾಗಿ ಮನವಿ ಸಲ್ಲಿಸಿದ್ದರೆ, ಇನ್ನು ಕೆಲವರು ಸಲ್ಲಿಸಿರುವ ಮರುಪರಿಶೀಲನಾ ಅರ್ಜಿಗಳು ವಿಚಾರಣೆಗೆ ಬಾಕಿಯುಳಿದಿವೆ.





