ಅನುಮತಿ ಇಲ್ಲದೆ ಡ್ರೋನ್ ಬಳಸಿದರೆ ಕಾನೂನು ಕ್ರಮ: ಶಶಿಕುಮಾರ್ ಎಚ್ಚರಿಕೆ
ಬಸ್ಸಿನಲ್ಲಿ ಯುವತಿಗೆ ಕಿರುಕುಳ ಪ್ರಕರಣದ ತನಿಖೆ ಮುಂದುವರಿಕೆ
ಮಂಗಳೂರು, ಜ.18: ನಗರದಲ್ಲಿ ಅವ್ಯಾಹತವಾಗಿ ಡ್ರೋನ್ಗಳನ್ನು ಬಳಕೆ ಮಾಡುತ್ತಿರುವುದು ಕಂಡುಬಂದಿದೆ. ಮದುವೆ, ವಿಐಪಿ ಕಾರ್ಯಕ್ರಮ ಸೇರಿದಂತೆ ಯಾವುದೇ ಖಾಸಗಿ ಕಾರ್ಯಕ್ರಮಗಳಲ್ಲಿ ಡಿಜಿಸಿಎ ನಿಯಮ ಉಲ್ಲಂಘಿಸಿ ಡ್ರೋನ್ ಬಳಕೆಯಾಗುತ್ತಿದ್ದಲ್ಲಿ ಅವುಗಳನ್ನು ವಶಪಡಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಡ್ರೋನ್ ಬಳಸಲು ಮುಂದಾಗುವವರು ಅಥವಾ ಡ್ರೋನ್ ಹೊಂದಿರುವವರು ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯ ಎಂದು ಅವರು ಸುದ್ದಿಗೋಷ್ಠಿಯಲ್ಲಿಂದು ಹೇಳಿದರು.
ಬಸ್ಸಿನಲ್ಲಿ ಯುವತಿಗೆ ಕಿರುಕುಳ ಪ್ರಕರಣ: ತನಿಖೆ ಮುಂದುವರಿಕೆ
ಬಸ್ಸಿನಲ್ಲಿ ಯುವತಿಯೊಬ್ಬರಿಗೆ ವ್ಯಕ್ತಿಯೊಬ್ಬ ಕಿರುಕುಳ ನೀಡಿ ಅನುಚಿತವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂರು ತಂಡಗಳ ಮೂಲಕ ತನಿಖೆ ನಡೆಯುತ್ತಿದೆ. ಈವರೆಗೂ ಆರೋಪಿಯ ಸುಳಿವು ದೊರಕಿಲ್ಲ. ಆತ ಮಲಯಾಳಂ ಮಾತನಾಡುತ್ತಿದ್ದ ಕಾರಣ ಕೇರಳ ಮೂಲದವನಾಗಿರಬಹುದೆಂದು ಶಂಕಿಸಲಾಗಿದೆ. ಅಂದು ಆ ಬಸ್ಸು ಎಲ್ಲೆಲ್ಲಾ ಪ್ರಯಾಣ ಬೆಳೆಸಿದ ಆ ನಿಟ್ಟಿನಲ್ಲೂ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದರು.