ಎರಡು ದಿನದಲ್ಲಿ ಖಾತೆಗಳ ಹಂಚಿಕೆ : ಕುಂಭಾಶಿಯಲ್ಲಿ ಸಿಎಂ ಯಡಿಯೂರಪ್ಪ
ಕುಂಭಾಶಿ, ಜ.19: ಮುಂದಿನ ಎರಡು ದಿನಗಳಲ್ಲಿ ಹೊಸದಾಗಿ ಪ್ರಮಾಣ ವಚನ ಸ್ವೀಕರಿಸಿರುವ ಸಚಿವರಿಗೆ ಖಾತೆಗಳ ಹಂಚಿಕೆ ಮಾಡುವುದಾಗಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಕುಂದಾಪುರ ತಾಲೂಕು ಕುಂಭಾಶಿಯ ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನ ದಲ್ಲಿ ಮಂಗಳವಾರ ನಡೆದ ಸಹಸ್ರ ನಾರಿಕೇಳ ಗಣಯಾಗದಲ್ಲಿ ಭಾಗವಹಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.
ಕಳೆದೆರಡು ದಿನದಿಂದ ಉಡುಪಿಯಲ್ಲಿ ಧಾರ್ಮಿಕ ಪ್ರವಾಸ ಮಾಡಿದ್ದೇನೆ. ಸಕಾಲಕ್ಕೆ ಮಳೆ ಬೆಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ ರಾಜ್ಯಕ್ಕೆ ಸಮೃದ್ಧಿಯಾಗಲಿ ಎಂದು ದೇವರಲ್ಲಿ ಬೇಡಿಕೊಂಡಿದ್ದೇನೆ ಎಂದರು.
ಎರಡು ದಿನದಲ್ಲಿ ಖಾತೆ ಹಂಚಿಕೆ ಮಾಡುತ್ತೇನೆ. ಶೀಘ್ರವೇ ವಿಧಾನ ಮಂಡಲ ಅಧಿವೇಶನ ಶುರುವಾಗುತ್ತದೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಸರಕಾರ ಶ್ರಮಿಸುತ್ತಿದೆ ಎಂದವರು ಹೇಳಿದರು.
ಮಾರ್ಚ್ ಮೊದಲ ವಾರ ಬಜೆಟ್: ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಬಜೆಟ್ ಮಂಡನೆ ಮಾಡುತ್ತೇನೆ. ಹಣಕಾಸಿನ ಇತಿಮಿತಿಯಲ್ಲಿ ಬಜೆಟ್ ಘೋಷಣೆ ಮಾಡಬೇಕಾಗಿದೆ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದ ರೇಣುಕಾಚಾರ್ಯರ ಅಸಮಾಧಾನದ ಕುರಿತು ಮಾತನಾಡಿದ ಯಡಿಯೂರಪ್ಪ, ಶಾಸಕ ರೇಣುಕಾಚಾರ್ಯ ಜೊತೆ ಮಾತನಾಡಿದ್ದೇನೆ. ಯಾವುದೇ ಗೊಂದಲದ ವಾತಾವರಣ ಇಲ್ಲ. ಇವತ್ತು ಬೆಂಗಳೂರಿನಲ್ಲಿ ರೇಣುಕಾಚಾರ್ಯ ನನ್ನನ್ನು ಭೇಟಿ ಮಾಡುತ್ತಾರೆ ಎಂದವರು ನುಡಿದರು.
ಸಂಸದ ರಾಘವೇಂದ್ರ ಹೇಳಿಕೆ: ಸಚಿವ ಖಾತೆ ನೀಡದಿರುವುದರಿಂದ ಅಸಮಾಧಾನಗೊಂಡ ಶಾಸಕ ರೇಣುಕಾಚಾರ್ಯರ ಹೊಸದಿಲ್ಲಿ ಪ್ರವಾಸದ ಕುರಿತು ಮಾತನಾಡಿದ ಶಿವಮೊಗ್ಗದ ಸಂಸದ ಬಿ.ವೈ.ರಾಘವೇಂದ್ರ, ರೇಣುಕಾಚಾರ್ಯ ಅವರು ಸಹಜವಾಗಿಯೇ ತಮ್ಮ ನೋವನ್ನು ಬೇರೆಬೇರೆ ರೀತಿಯಲ್ಲಿ ವ್ಯಕ್ತಪಡಿಸುತಿದ್ದಾರೆ. ಮನುಷ್ಯ ಅಂದಮೇಲೆ ನೋವು ಇರೋದು ಸಹಜ. ಒಬ್ಬೊಬ್ಬರಿಗೂ ಅವರದೇ ವೈಯಕ್ತಿಕ ವಿಚಾರ ಇರುತ್ತೆ. ಒಂದು ಚೌಕಟ್ಟಿನಲ್ಲಿ ಕುಳಿತು ಸಮಸ್ಯೆ ಬಗೆಹರಿಸಿಕೊಳ್ಳಲು ಅವಕಾಶ ಇದೆ. ಒಂದೆರಡು ದಿನ ನೋವನ್ನು ಹೊರಹಾಕುತ್ತಾರೆ. ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ ವಿಶ್ವಾಸ ನಮಗಿದೆ ಎಂದರು.