ನಟನೆ ಮಾಡೋದನ್ನು ಎಚ್.ಡಿ.ಕುಮಾರಸ್ವಾಮಿ ಅವರಿಂದಲೇ ಕಲಿಯಬೇಕು: ಶಾಸಕ ಜಿ.ಟಿ.ದೇವೇಗೌಡ
ಮೈಸೂರು,ನ.19: ನಟನೆ ಮಾಡೋದನ್ನು ಎಚ್.ಡಿ.ಕುಮಾರಸ್ವಾಮಿ ಅವರಿಂದಲೇ ಕಲಿಯಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ರೋಗ ಇರುವವರನ್ನು ಪತ್ತೆ ಹಚ್ಚಬಹುದು. ಆದರೆ ರೋಗ ಇರುವಂತೆ ನಟನೆ ಮಾಡುವವರನ್ನು ಪತ್ತೆ ಹಚ್ಚೋದು ಕಷ್ಟ ಎಂಬ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಿ.ಟಿ.ದೇವೇಗೌಡ, ಪಕ್ಷ ಸಂಘಟನೆ ವಿಚಾರವಾಗಿ ಮೇಲ್ವಿಚಾರಣೆ ವಿಭಾಗದಲ್ಲಿ ನನ್ನ ಹೆಸರು ಕೈ ಬಿಟ್ಟಿದ್ದಾರೆ. ಸಂಘಟನೆಯಲ್ಲಿ ನನಗೆ ವಯಸಾಯ್ತು ಎಂದು ಕೈ ಬಿಟ್ಟಿರಬೇಕು. ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗಲೇ ನನ್ನ ಮಾತು ನಡೆಯುತ್ತಿರಲಿಲ್ಲ. ಇನ್ನು ಈಗ ನಡೆಯುತ್ತಾ? ಪಾಲಿಕೆ ಮೇಯರ್ ವಿಚಾರದಲ್ಲಿ ನನ್ನನ್ನು ಬಿಟ್ಟು ಸಭೆ ನಡೆಸಿದ್ದಾರೆ. ಮಾಧ್ಯಮಗಳ ಮುಂದೆ ಹೇಳೋದೆ ಒಂದು, ನಡೆದುಕೊಳ್ಳುವ ರೀತಿಯೆ ಇನ್ನೊಂದು ಎಂದು ಅವರು ಹೇಳಿದರು.
ನಾನು ಜೆಡಿಎಸ್ ಶಾಸಕ, ಸಚಿವನಾಗಬೇಕು ಎಂಬ ಆಸೆ ಇದ್ದಿದ್ದರೆ, ವಿಶ್ವನಾಥ್, ನಾರಾಯಣಗೌಡರಂತೆ ನಾನು ಸಹ ಪಕ್ಷ ಬಿಡಬಹುದಿತ್ತು. ಆದರೆ, ಕುಮಾರಸ್ವಾಮಿಯನ್ನು ನಾನೇ ಮುಖ್ಯಮಂತ್ರಿ ಮಾಡಿ, ನಾನೇ ಪದಚ್ಯುತಿ ಮಾಡ್ತೀನಾ? ಆ ಕೆಲಸ ನಾನು ಮಾಡಿಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಂದಿನ ತಾಪಂ ಹಾಗೂ ಜಿಪಂ ಚುನಾವಣೆಗೂ ಸ್ವತಃ ನಾನೇ ಬಿ. ಫಾರಂ ಕೊಡ್ತೀನಿ ಅಂತ ಎಚ್ಡಿಕೆ ಹೇಳಿದ್ದಾರೆ. ಹಾಗಾಗಿ, ಆ ಬಗ್ಗೆಯೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ತಿಳಿಸಿದರು.