ಕಳೆದ ವಾರ ಮಮತಾ ಬ್ಯಾನರ್ಜಿಯೊಂದಿಗೆ ವೇದಿಕೆ ಹಂಚಿಕೊಂಡಿದ್ದ ಟಿಎಂಸಿ ಶಾಸಕ ಬಿಜೆಪಿಗೆ ಜಂಪ್

ಕೋಲ್ಕತಾ: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವಾಗ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷ ತನ್ನ ಒಂದೊಂದೇ ನಾಯಕರುಗಳನ್ನು ಕಳೆದುಕೊಳ್ಳುತ್ತಿದೆ. ಇಂದು ಪಕ್ಷದ ಶಾಸಕ ಅರಿಂದಮ್ ಭಟ್ಟಾಚಾರ್ಯ ದಿಲ್ಲಿಯಲ್ಲಿ ಬಿಜೆಪಿಯ ಪಕ್ಷವನ್ನು ಸೇರಿಕೊಂಡರು.
ಶಾಂತಿಪುರದ ಶಾಸಕ ಭಟ್ಟಾಚಾರ್ಯ ನಾಡಿಯಾ ಜಿಲ್ಲೆಯಲ್ಲಿ ತೃಣಮೂಲಕ್ಕೆ ಕೈಕೊಟ್ಟ ಮೊದಲ ಶಾಸಕನಾಗಿದ್ದಾರೆ. ಕಳೆದ ವಾರ ನಾಡಿಯಾದಲ್ಲಿ ನಡೆದಿದ್ದ ರ್ಯಾಲಿಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯೊಂದಿಗೆ ಭಟ್ಟಾಚಾರ್ಯ ವೇದಿಕೆ ಹಂಚಿಕೊಂಡಿದ್ದರು.
2016ರ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನಿಂದ ಸ್ಪರ್ಧಿಸಿ ಜಯ ಸಾಧಿಸಿದ್ದ ಭಟ್ಟಾಚಾರ್ಯ ಬಳಿಕ 2017ರಲ್ಲಿ ತೃಣಮೂಲ ಕಾಂಗ್ರೆಸ್ ಗೆ ತನ್ನ ನಿಷ್ಠೆ ಬದಲಿಸಿದರು. ನಾಡಿಯಾ ಜಿಲ್ಲಾ ಘಟಕದ ತೃಣಮೂಲ ಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದರು.
ಈ ಬಾರಿಯ ಚುನಾವಣೆಯಲ್ಲಿ ಶಾಂತಿಪುರದಿಂದ ತನಗೆ ಟಿಕೆಟ್ ಸಿಗುವುದಿಲ್ಲ ಎಂದು ಅರಿತಿರುವ ಭಟ್ಟಾಚಾರ್ಯ ಪಕ್ಷ ಬದಲಿಸಲು ನಿರ್ಧರಿಸಿದ್ದಾರೆ. ಭಟ್ಟಾಚಾರ್ಯಗೆ ಬೇರೆಡೆ ಟಿಕೆಟ್ ನೀಡಿ ಅಜಯ ದೇವ್ ಗೆ ಶಾಂತಿಪುರದ ಟಿಕೆಟ್ ನೀಡಲು ನಿರ್ಧರಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ತೃಣಮೂಲ ಕಾಂಗ್ರೆಸ್ ಬಂಗಾಳದಲ್ಲಿ ಹೆಚ್ಚು ಸವಾಲು ಎದುರಿಸುತ್ತಿದ್ದು 2011ರಲ್ಲಿ ಅಧಿಕಾರಕ್ಕೆ ಬಂದ ಬಳಿಕ 40ಕ್ಕೂ ಅಧಿಕ ನಾಯಕರು ಹಾಗು ಶಾಸಕರು ಕಳೆದ ಕೆಲವು ತಿಂಗಳುಗಳಲ್ಲಿ ಬಿಜೆಪಿಗೆ ಪಕ್ಷಾಂತರಗೊಂಡಿದ್ದಾರೆ. ಮಮತಾ ಅವರ ಬಲಗೈ ಬಂಟನಾಗಿದ್ದ ನಂದಿಗ್ರಾಮದ ಶಾಸಕ ಸುವೇಂದು ಅಧಿಕಾರಿ ಬಿಜೆಪಿಗೆ ಪಕ್ಷಾಂತರವಾಗಿರುವುದು ತೃಣಮೂಲ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿದೆ.







