ಪ್ರಗತಿನಿಧಿಗೆ ಬಡ್ಡಿ ದರ ಇಳಿಕೆ: ಡಾ.ಡಿ.ವೀರೇಂದ್ರ ಹೆಗ್ಗಡೆ
ಉಡುಪಿ, ಜ.20: ಕಳೆದ ವರ್ಷದ ಕೋವಿಡ್-19ರ ನಂತರ ನಮ್ಮ ಪ್ರಗತಿ ನಿಧಿಯ ಬಡ್ಡಿದರವನ್ನು ಶೇ.15ರಿಂದ ಶೇ.13.5ಕ್ಕೆ ಇಳಿಸಿದ್ದು, ಇದನ್ನು ಜನರು ಗುರುತಿಸಿರುವುದು ಖುಷಿಯ ವಿಚಾರ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಮಂಗಳವಾರ ಉಡುಪಿ ಜಿಲ್ಲೆಯ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ಪ್ರಗತಿ ಸೌಧ’ದಲ್ಲಿ ಯೋಜನೆಯ ಕಾರ್ಯಕರ್ತರು, ಪ್ರಾದೇಶಿಕ ಕಚೇರಿಯ ಸಿಬ್ಬಂದಿಗಳಿಗೆ ಹಾಗೂ ತರಬೇತಿ ಸಂಸ್ಥೆಯ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಾ ಅವರು ಈ ವಿಷಯ ತಿಳಿಸಿದರು.
ಕೋವಿಡ್-19ರಿಂದಾಗಿ ಕಳೆದ ವರ್ಷ ಎದುರಾದ ಸಮಸ್ಯೆ, ತೊಂದರೆಗಳ ಕುರಿತು ಚರ್ಚಿಸಿದ ಅವರು, ಆದರೆ ಕೃಷಿ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆ ಕಂಡುಬಂದಿದೆ, ಕೃಷಿ ಮಾಡದೆ ಬರಡಾಗಿದ್ದ ಪ್ರದೇಶಗಳಲ್ಲಿ ಕೃಷಿ ಬೆಳೆದು ಹಚ್ಚ ಹಸಿರಿನಿಂದ ಕಾಣುತ್ತಿದೆ. ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳಲ್ಲಿ ಜನ ಹೆಚ್ಚು ಆಸಕ್ತಿಯಿಂದ ಪಾಲ್ಗೊಳ್ಳುತಿದ್ದಾರೆ ಎಂದರು.
ಈ ವರ್ಷ ಜನರಿಗೆ ಇನ್ನಷ್ಟು ಅವಶ್ಯಕತೆಯಿರುವ ಸಾಲದ ಅಗತ್ಯತೆಯನ್ನು ಗುರುತಿಸಿ ಆರ್ಥಿಕ ಸಹಕಾರ ನೀಡುವುದು. ಕ್ಷೇತ್ರದಿಂದ ಅನೇಕ ರೀತಿಯ ಸಹಾಯ ಮಾಡಿದ್ದೇವೆ. ದಾನಧರ್ಮಗಳೂ ನಡೆಯುತ್ತಿವೆ. ನಿರ್ಗತಿಕರಿಗೆ ಮೂಲ ಸೌಕರ್ಯಗಳನ್ನು ಗುರುತಿಸಿ ಅವುಗಳನ್ನು ನೀಡುವ ವಾತ್ಸಲ್ಯ ಕಾರ್ಯಕ್ರಮವಿದೆ ಎಂದರು.
ಈ ವರ್ಷ ಹೊಸ ಹೊಸ ಕಾರ್ಯಕ್ರಮಗಳು ಜಾರಿಗೊಳ್ಳುತ್ತಿವೆ. ವಿದ್ಯಾರ್ಥಿಗಳಿಗೆ ಟ್ಯಾಬ್ ಮತ್ತು ಲ್ಯಾಪ್‌ಟಾಪ್ ನೀಡುವ ಕಾರ್ಯಕ್ರಮವಿದೆ. ನಿರ್ಗತಿಕರಿಗೆ ಪಾತ್ರೆ, ಚಾಪೆ, ಬಟ್ಟೆ, ಹೊದಿಕೆ ನೀಡುವ ಹೇಮಾವತಿ ವಿ.ಹೆಗ್ಗಡೆಯವರ ವಾತ್ಸಲ್ಯ ಕಾರ್ಯಕ್ರಮವಿದೆ. 15,000ಕ್ಕಿಂತ ಅಧಿಕ ದೇವಸ್ಥಾನ, ಚರ್ಚ್, ಮಸೀದಿ ಹಾಗೂ ಬಸದಿಗಳ ಸ್ವಚ್ಛತಾ ಕಾರ್ಯ ನಡೆದಿದೆ ಎಂದರು.
ಉಡುಪಿ ಜಿಲ್ಲೆಯ ಹಿರಿಯ ನಿರ್ದೇಶಕ ಗಣೇಶ್ ಬಿ. ಸ್ವಾಗತಿಸಿದರೆ, ಉಡುಪಿ ಪ್ರಾದೇಶಿಕ ನರ್ದೇಶಕ ವಸಂತ ಸಾಲ್ಯಾನ್ ವಂದಿಸಿದರು.