ಬೈಕ್ ಢಿಕ್ಕಿ: ಮಹಿಳೆ ಮೃತ್ಯು
ಮಂಗಳೂರು, ಜ.20: ನಗರದ ಹೊರವಲಯದ ಕಣ್ಣೂರು ಕೊಡೆಕ್ಕಲ್ ಆಟೋ ವರ್ಕ್ಸ್ ಶಾಪ್ ಬಳಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಬೈಕ್ ಢಿಕ್ಕಿಯಾಗಿ ಮಹಿಳೆ ಮೃತಪಟ್ಟ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.
ಮೂಲತಃ ಕೊಪ್ಪಳದ ಕುಷ್ಟಗಿ ನಿವಾಸಿ, ಪ್ರಸ್ತುತ ಉಚ್ಚಿಲದಲ್ಲಿ ವಾಸವಾಗಿರುವ ರೇಣುಕಾ(30) ಮೃತಪಟ್ಟ ದುರ್ದೈವಿ.
ಮೃತ ರೇಣುಕಾ ಸ್ಥಳೀಯವಾಗಿ ಕೂಲಿ ಕೆಲಸಕ್ಕೆ ತೆರಳುತ್ತಿದ್ದರು. ಎಂದಿನಂತೆ ಬುಧವಾರ ಬೆಳಗ್ಗೆ 7:30ರ ಸುಮಾರಿಗೆ ಕೆಲಸಕ್ಕೆ ಹೋಗುತ್ತಿದ್ದರು. ಈ ವೇಳೆ ಬಿ.ಸಿ.ರೋಡ್ ಕಡೆಯಿಂದ ಮಂಗಳೂರು ಕಡೆಗೆ ಬೈಕ್‌ವೊಂದು ಸಂಚರಿಸುತ್ತಿದ್ದು, ರೇಣುಕಾ ಅವರಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ. ರೇಣುಕಾ ಅವರ ಹಣೆಯ ಬಲಬದಿಗೆ ಹಾಗೂ ದೇಹದ ಇತರ ಭಾಗಗಳಿಗೂ ಗಂಭೀರ ಸ್ವರೂಪದ ಗಾಯಗಳಾಗಿ ದ್ದವು. ಗಾಯಾಳುಗಳನ್ನು ಕೂಡಲೇ ಸಾರ್ವಜನಿಕರು ವಾಹನವೊಂದರಲ್ಲಿ ವೆನ್ಲಾಕ್ ಆಸ್ಪತ್ರೆಗೆ ತಂದು ದಾಖಲಿಸಿದ್ದಾರೆ. ವೈದ್ಯರು ಪರೀಕ್ಷಿಸಿದಾಗ ಕಾರ್ಮಿಕ ಮಹಿಳೆ ಮೃತಪಟ್ಟಿರುವುದು ತಿಳಿದುಬಂದಿದೆ. ಬೈಕ್ ಸವಾರ ಕೂಡ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ.
ಈ ಕುರಿತು ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





