ಯುಪಿಸಿಎಲ್ ವಾಗ್ದಾನ ಪಾಲಿಸದ ಆರೋಪ : ಸಂತ್ರಸ್ಥರಿಂದ ಜ.29ಕ್ಕೆ ಪ್ರತಿಭಟನೆಯ ಬೆದರಿಕೆ

ಉಡುಪಿ, ಜ. 22: ಎಲ್ಲೂರಿನಲ್ಲಿ ಕಾರ್ಯಾಚರಿಸುತ್ತಿರುವ ಯುಪಿಸಿಎಲ್ ಅದಾನಿ ಉಷ್ಣವಿದ್ಯುತ್ ಸ್ಥಾವರ ಘಟಕದ ವಿಸ್ತರಣೆ ಸಲುವಾಗಿ ಭೂಸ್ವಾಧೀನ ಮಾಡುವಾಗ ಮನೆಮಠ ಕಳೆದುಕೊಂಡ ಭೂಸಂತ್ರಸ್ಥರ ಕುಟುಂಬದ ಒಬ್ಬ ಸದಸ್ಯನಿಗೆ ಕಂಪೆನಿಯಲ್ಲಿ ಖಾಯಂ ಉದ್ಯೋಗ ಅಥವಾ ಉದ್ಯೋಗ ಬೇಡ ವಾದಲ್ಲಿ ಉದ್ಯೋಗ ಪರಿಹಾರಧನ ನೀಡುವುದಾಗಿ ಉಡುಪಿ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ನೀಡಿದ ವಾಗ್ದಾನವನ್ನು ಯುಪಿಸಿಎಲ್ ಕಂಪೆನಿ ಪಾಲಿಸಿಲ್ಲ ಎಂದು ಎಲ್ಲೂರು ಆಸುಪಾಸಿನ ಸಂತ್ರಸ್ಥ ಕುಟುಂಬಗಳು ಆರೋಪಿಸಿವೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಸಂತ್ರಸ್ಥ ಕುಟುಂಬದವರು ಈ ಆರೋಪ ಮಾಡಿದರು. ಸಂತ್ರಸ್ಥರ ಪರವಾಗಿ ಮಾತನಾಡಿದ ಬಾಲಕೃಷ್ಣ ಇವರು, ಸಭೆ ನಡೆದು ಈಗಾಗಲೇ ಐದು ವರ್ಷ ಕಳೆದಿದ್ದು, ಭೂಸಂತ್ರಸ್ಥರನ್ನು ಒಕ್ಕಲೆಬ್ಬಿಸಿ ನಾಲ್ಕು ವರ್ಷ ಕಳೆದಿದೆ. 2015ರ ಡಿ.16ರಂದು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಬೆಯಲ್ಲಿ ಕಂಪೆನಿ ನೀಡಿದ ಭರವಸೆ ಯಂತೆ ಮನೆಮಠ, ಜಮೀನು ಕಳೆದುಕೊಂಡ ಭೂಸಂತ್ರಸ್ತರ ಕುಟುಂಬದ ಒಬ್ಬ ಸದಸ್ಯನಿಗೆ ಇನ್ನೂ ಖಾಯಂ ಉದ್ಯೋಗ ಅಥವಾ ಉದ್ಯೋಗ ಪರಿಹಾರಧನ ವನ್ನು ನೀಡಿಲ್ಲ ಎಂದು ದೂರಿದರು.
ಯೋಜನೆಯ ಎರಡನೇ ಹಂತದ ವಿಸ್ತರಣೆಗಾಗಿ ಎಲ್ಲೂರು ಗ್ರಾಮದ 34 ಕುಟುಂಬಗಳನ್ನು ಒಕ್ಕಲೆಬ್ಬಿಸಿ 139 ಎಕರೆ ಫಲವತ್ತಾದ ಕೃಷಿ ಪ್ರದೇಶವನ್ನು ಭೂಸ್ವಾಧೀನ ಪಡಿಸಿಕೊಳ್ಳಲಾಗಿತ್ತು ಎಂದರು. ಈಗ ನಮಗೆ ಕೃಷಿ ಮಾಡಿ ಬದುಕಲು ಭೂಮಿಯೂ ಇಲ್ಲ, ಅತ್ತ ಭರವಸೆ ನೀಡಿದ ಉದ್ಯೋಗವೂ ಇಲ್ಲ ಎಂದವರು ಹೇಳಿದರು.
ಪಾಳುಬಿದ್ದ ಭೂಮಿ: ಯುಪಿಸಿಎಲ್ ಪರವಾಗಿ ಕೆಐಎಡಿಬಿ ಎಲ್ಲೂರಿನಲ್ಲಿ 139 ಎಕರೆ ಪ್ರದೇಶ ದಲ್ಲಿದ್ದ 34 ಕುಟುಂಬಗಳನ್ನು ಒಕ್ಕಲೆಬ್ಬಿಸಿತ್ತು. ಒಪ್ಪಂದದಂತೆ ಅವರಿಗೆಲ್ಲರಿಗೂ ನೀಡಬೇಕಾದ ಪರಿಹಾರ ಮೊತ್ತವನ್ನು ನೀಡಲಾಗಿತ್ತು. ಆದರೆ ಪ್ರತಿಕುಟುಂಬದ ಒಬ್ಬ ಸದಸ್ಯನಿಗೆ ಉದ್ಯೋಗ ನೀಡುವ ಭರವಸೆ ಮಾತ್ರ ಇನ್ನೂ ಈಡೇರಿಲ್ಲ. ಈಗ ಅಲ್ಲಿ ಭೂಮಿ ಯಾವ ಉಪಯೋಗಕ್ಕೆ ಬಾರದೇ ಪಾಳು ಬಿದ್ದಿದೆ. ಇಲ್ಲಿ ನಮಗೆ ಉದ್ಯೋಗವಿಲ್ಲ ಎಂದು ಸಂತ್ರಸ್ಥ ನಿತೀಶ್ ಶೆಟ್ಟಿಗಾರ್ ಅವಲತ್ತು ಕೊಂಡರು.
34 ಕುಟುಂಬಗಳಲ್ಲಿ ಸುಮಾರು 20ರಿಂದ 25 ಕುಟುಂಬಗಳ ಒಬ್ಬ ಸದಸ್ಯರು ಕಂಪೆನಿಯಲ್ಲಿ ಅರ್ಹತೆಗೆ ತಕ್ಕ ಖಾಯಂ ಉದ್ಯೋಗ ಕ್ಕಾಗಿ ಚಾತಕಪಕ್ಷಿಯಂತೆ ಕಾಯುತಿದ್ದಾರೆ. ಉಳಿದ 10-15 ಕುಟುಂಬಗಳು ಉದ್ಯೋಗ ಬೇಡವೆಂದು ಹೇಳಿದ್ದರೂ ಅವರಿಗೆ ಇನ್ನೂ ಪರಿಹಾರ ಧನ ಸಿಕ್ಕಿಲ್ಲ ಎಂದು ಬಾಲಕೃಷ್ಣ ವಿವರಿಸಿದರು.
ತಮಗೆ ಸಿಗಬೇಕಾದ ಪರಿಹಾರಕ್ಕಾಗಿ ಸಂತ್ರಸ್ಥರು ಈಗಾಗಲೇ ಜಿಲ್ಲಾಧಿಕಾರಿ, ಯುಪಿಸಿಎಲ್ ಕಂಪೆನಿ, ಕೆಐಎಡಿಬಿ, ಸ್ಥಳೀಯ ಶಾಸಕರಿಗೆ, ರಾಜ್ಯ ಕೈಗಾರಿಕಾ ಸಚಿವರಿಗೆ ಹಾಗೂ ಗುಜರಾತ್‌ನಲ್ಲಿರುವ ಅದಾನಿಯ ಪ್ರಧಾನ ಕಚೇರಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದ್ದರೂ, ಯಾರಿಂದಲೂ ಸೂಕ್ತ ಪ್ರತಿಕ್ರಿಯೆ ಬಂದಿಲ್ಲ ಎಂದರು.
ಈ ಬಗ್ಗೆ ಸಂತ್ರಸ್ಥರು ಯುಪಿಸಿಎಲ್ ಅದಾನಿಯ ಜಂಟಿ ಅಧ್ಯಕ್ಷ ಕಿಶೋರ್ ಆಳ್ವರನ್ನು ಭೇಟಿಯಾಗಿ ವಿಚಾರಿಸಿದಾಗ ಸೂಕ್ತವಾಗಿ ಸ್ಪಂಧಿಸಿಲ್ಲ. ಅಲ್ಲದೇ ಘಟಕ ಸ್ಥಾಪನೆಗೆ ಸರಕಾರದ ಅನುಮತಿ ಇನ್ನೂ ಸಿಕ್ಕಿಲ್ಲ, ಹೀಗಾಗಿ ಉದ್ಯೋಗ ನೀಡು ಸಾಧ್ಯವಿಲ್ಲ ಎಂದಿದ್ದಾರೆ ಎಂದು ನಿತೀಶ್ ಶೆಟ್ಟಿಗಾರ್ ನುಡಿದರು.
ಆದರೆ ಫಲವತ್ತಾದ ಕೃಷಿಭೂಮಿಯಲ್ಲಿ ಬರುತಿದ್ದ ಆದಾಯದ ಮೇಲೆ ಅವಲಂಬಿತರಾಗಿ ಜೀವನ ಸಾಗಿಸುತಿದ್ದ ನಾವು ಇಂದು ಕೃಷಿ ಆದಾಯವೂ ಇಲ್ಲದೇ, ಇತ್ತ ಕಂಪೆನಿ ಉದ್ಯೋಗವೂ ಸಿಗದೇ ಅತಂತ್ರರಾಗಿದ್ದೇವೆ. ತುರ್ತಾಗಿ ಒಂದು ವಾರದ ನೋಟೀಸು ನೀಡಿ ನಮ್ಮನ್ನೆಲ್ಲಾ ಒಕ್ಕೆಲೆಬ್ಬಿಸಿದ ಕೆಐಎಡಿಬಿ ಆಗಲಿ, ಇದರ ಲಾಭ ಪಡೆದ ಯುಪಿಸಿಎಲ್ ಆಗಲಿ ನಮ್ಮ ನೆರವಿಗೆ ಬರುತ್ತಿಲ್ಲ ಎಂದವರು ದೂರಿದರು.
ಘಟಕ ವಿಸ್ತರಣೆಗೆ ಕಂಪೆನಿಗೆ ಸರಕಾರದ ಅನುಮತಿ ಸಿಕ್ಕಿಲ್ಲವಾದರೆ ನಮ್ಮನ್ನು ತುರ್ತಾಗಿ ಒಕ್ಕಲೆಬ್ಬಿಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ ಸಂತ್ರಸ್ಥರು, ಈಗ ಕಾರ್ಯಾಚರಿಸುತ್ತಿರುವ ಘಟಕದಲ್ಲೇ ನಮಗೂ ಉದ್ಯೋಗ ನೀಡಿ ಎಂದು ಮನವಿ ಮಾಡಿದರು. ಕೂಡಲೇ ನಮಗೆಲ್ಲಾ ಖಾಯಂ ಉದ್ಯೋಗ ನೀಡಿ ಅಥವಾ ಉದ್ಯೋಗ ಬೇಡದವರಿಗೆ ಪರಿಹಾರಧನ ನೀಡಿ. ನಮ್ಮ ಈ ಸಮಸ್ಯೆ ಯನ್ನು ಒಂದು ತಿಂಗಳೊಳಗೆ ಬಗೆಹರಿಸಬೇಕು ಎಂದರು.
ಈ ಬಗ್ಗೆ ಚರ್ಚಿಸಲು ಜ.28ರೊಳಗೆ ಭೂಸಂತ್ರಸ್ಥರ ಜೊತೆ ಸಭೆ ನಡೆಸಬೇಕು. ತಪ್ಪಿದಲ್ಲಿ ಜ.29ರಂದು ಎಲ್ಲೂರಿನಲ್ಲಿರುವ ಅದಾನಿ ಯುಪಿಸಿಎಲ್ ಕಂಪೆನಿಯ ಮುಖ್ಯದ್ವಾರದ ಎದುರು ನಾವು ಪ್ರತಿಭಟನೆ ನಡೆಸುತ್ತೇವೆ ಎಂದವರು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂತ್ರಸ್ಥ ಕುಟುಂಬದ ಕಿರಣ್‌ಕುಮಾರ್, ರೇಶ್ಮಾ ಮಿನೇಜಸ್, ಜಾನೆಟ್ ಡಿಸೋಜ, ಫೆಲ್ಸಿ ಡಿಸೋಜ, ಗಣೇಶ್ ಪ್ರಸಾದ್ ಉಪಸ್ಥಿತರಿದ್ದರು.







