ಮೃತ ಪುತ್ರನ ವೀರ್ಯದ ಬಗ್ಗೆ ನಿರ್ಧರಿಸಲು ತಂದೆಗೆ ಹಕ್ಕು ಇಲ್ಲ: ಹೈಕೋರ್ಟ್
ಹೊಸದಿಲ್ಲಿ, ಜ.22: ಮೃತ ಪುತ್ರನ ವೀರ್ಯದ ಕುರಿತು ನಿರ್ಧಾರ ತೆಗೆದುಕೊಳ್ಳುವ ಹಕ್ಕು ತನಗೆ ಮಾತ್ರ ಇದೆ ಎಂದು ಮೃತನ ತಂದೆ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿರುವ ಕಲ್ಕತ್ತಾ ಹೈಕೋರ್ಟ್, ಈ ವಿಷಯದಲ್ಲಿ ಮೃತನ ತಂದೆಗೆ ಯಾವುದೇ ಮೂಲಭೂತ ಹಕ್ಕು ಇರುವುದಿಲ್ಲ ಎಂದು ಹೇಳಿದೆ. ದಿಲ್ಲಿಯ ಆಸ್ಪತ್ರೆಯಲ್ಲಿ ಸಂಗ್ರಹಿಸಿಟ್ಟಿರುವ ಮೃತ ಪುತ್ರನ ವೀರ್ಯದ ಬಗ್ಗೆ ನಿರ್ಧರಿಸಲು ಆತನ ತಂದೆಗೆ ಹಕ್ಕಿಲ್ಲ. ಮೃತ ವ್ಯಕ್ತಿಯ ಪತ್ನಿಗೆ ಮಾತ್ರ ಈ ಹಕ್ಕು ಇರುತ್ತದೆ ಎಂದು ನ್ಯಾಯಮೂರ್ತಿ ಸವ್ಯಸಾಚಿ ಭಟ್ಟಾಚಾರ್ಯ ತೀರ್ಪಿನಲ್ಲಿ ತಿಳಿಸಿದ್ದಾರೆ.
ಮೃತ ವ್ಯಕ್ತಿ ಮರಣ ಹೊಂದುವವರೆಗೂ ಪತ್ನಿಯೊಂದಿಗೆ ಸಂಬಂಧ ಹೊಂದಿದ್ದರಿಂದ ಈ ವಿಷಯದಲ್ಲಿ ಪತ್ನಿಗೆ ಮಾತ್ರ ಹಕ್ಕು ಇರುತ್ತದೆ ಎಂದು ನ್ಯಾಯಾಲಯ ಹೇಳಿದೆ. ಮಗನ ವೀರ್ಯವನ್ನು ತನ್ನ ವಶಕ್ಕೆ ನೀಡುವಂತೆ ಮಾಡಿಕೊಂಡ ಮನವಿಗೆ ಸೊಸೆ ಸ್ಪಂದಿಸುವಂತೆ ಅಥವಾ ಕನಿಷ್ಟಪಕ್ಷ ‘ನೋ ಆಬ್ಜೆಕ್ಷನ್’ (ಆಕ್ಷೇಪಣೆ ಇಲ್ಲ) ಪ್ರಮಾಣಪತ್ರ ನೀಡುವಂತೆ ನ್ಯಾಯಾಲಯ ನಿರ್ದೇಶಿಸಬೇಕು ಎಂದು ಅರ್ಜಿದಾರರ ವಕೀಲರು ಸಲ್ಲಿಸಿದ ಕೋರಿಕೆಗೆ ಪ್ರತ್ರಿಕ್ರಿಯಿಸಿದ ನ್ಯಾಯಪೀಠ, ಇಲ್ಲಿ ಯಾವುದೇ ಮೂಲಭೂತ ಹಕ್ಕು ಅಥವಾ ಶಾಸನಬದ್ಧ ಹಕ್ಕಿನ ಉಲ್ಲಂಘನೆಯಾಗಿಲ್ಲ. ಆದ್ದರಿಂದ ಹೀಗೆ ಮಾಡಲಾಗದು ಎಂದು ಸ್ಪಷ್ಟಪಡಿಸಿದೆ.







