ಫಲಿಮಾರು : ಎಸ್ಕೆಎಸ್ಸೆಸ್ಸೆಫ್ ಮಾನವ ಸರಪಳಿ

ಪಡುಬಿದ್ರಿ: ಧರ್ಮಧರ್ಮಗಳ ಮಧ್ಯೆ ವಿಷ ಬೀಜ ಬಿತ್ತಿ ದೇಶದ ಸೌಹಾರ್ದತೆಯನ್ನು ಹಾಳುಗೆಡಹಲು ಕೆಲವು ಶಕ್ತಿಗಳು ಯತ್ನಿಸುತ್ತಿದೆ. ಇದರಿಂದ ಎಚ್ಚರಿಕೆಯಿಂದ ಇರಬೇಕು ಎಂದು ಮೌಲಾನಾ ನಯಿಮ್ ಫೈಝಿ ಪುತ್ತೂರು ಹೇಳಿದರು.
ಫಲಿಮಾರಿನ ಜುಮ್ಮಾ ಮಸೀದಿ ಆವರಣದಲ್ಲಿ ಮಂಗಳವಾರ ರಾಷ್ಟ್ರರಕ್ಷಣೆಗೆ ಸೌಹಾರ್ದತೆಯ ಸಂಕಲ್ಪ ಎಂಬ ಘೋಷಣೆ ಯೊಂದಿಗೆ ಗಣರಾಜ್ಯೋತ್ಸವ ಪ್ರಯುಕ್ತ ಎಸ್‍ಕೆಎಸ್‍ಎಸ್‍ಎಫ್ ಹಮ್ಮಿಕೊಂಡ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತ ದೇಶದ ದೊಡ್ಡ ಶಕ್ತಿ ಸೌಹಾರ್ದತೆಯಾಗಿದೆ. ಈ ಸೌಹಾರ್ದತೆಯಿಂದಲೇ ಈ ದೇಶವನ್ನು ಬ್ರಿಟಿಷರಿಂದ ಮುಕ್ತಗೊಳಿಸ ಲಾಗಿದೆ. ಇದನ್ನು ಮುಂದುವರಿಸಿಕೊಂಡು ಹೋಗಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಲ್‍ಹಾಜ್ ಬೊಳ್ಳೂರು ಅಝ್‍ಹರ್ ಫೈಝಿ ಮಾತನಾಡಿ, ಭಾರತದ ಜಾತ್ಯಾತೀತ ಪರಂಪರೆಯನ್ನು ಉಳಿಸುವುದು ನಮ್ಮ ಕರ್ತವ್ಯ. ಯುವ ಸಮುದಾಯವನ್ನು ಈ ನಿಟ್ಟಿನಲ್ಲಿ ಸನ್ನದ್ಧಗೊಳಿಸುವುದು ಎಸ್ಕೆಎಸ್‍ಎಸ್‍ಎಫ್‍ನ ಉದ್ದೇಶ ಎಂದು ಹೇಳಿದರು.
ಎರ್ಮಾಳು ಜಾಮಿಯಾ ಮಸ್ಜಿದ್ ಕತೀಬ್ ಶಬ್ಬೀರ್ ಫೈಝಿ ಉದ್ಘಾಟಿಸಿದರು. ಕೆ.ಎಮ್. ರಹಿಮಾನ್ ಫೈಝಿ ದುವಾ ನೆರವೇರಿಸಿದರು.
ಸಾಂತೂರುಕೊಪ್ಲ ಚರ್ಚ್ ಪ್ರಧಾನ ಕಾರ್ಯದರ್ಶಿ ಆಲೆನ್ ಡಿಸೋಜ, ಫಲಿಮಾರು ಎಸ್ಕೆಎಸ್‍ಎಸ್‍ಎಫ್ ಅಧ್ಯಕ್ಷ ರಫೀಕ್ ಮುಹಮ್ಮದ್, ಉಡುಪಿ ರೇಂಜ್ ಅಧ್ಯಕ್ಷ ಫಾರೂಕ್ ಹನೀಫಿ ನಿಟ್ಟೆ, ಕೆ. ಅಬ್ದುಲ್ ರಹಿಮಾನ್ ಕನ್ನಂಗಾರ್, ಸಿರಾಜುದ್ದೀನ್ ಕನ್ನಂಗಾರ್ ಉಪಸ್ಥಿತರಿದ್ದರು.
ಎಂ.ಪಿ.ಮೊಯಿದಿನಬ್ಬ ಪ್ರಸ್ತಾವಿಕವಾಗಿ ಮಾತನಾಡಿದರು. ಅಬ್ದುಲ್ ಕರೀಂ ಮುಸ್ಲಿಯಾರ್ ಪವಿತ್ರ ಕುರಾನ್ ಪಠಿಸಿದರು. ಮೌಲಾನಾ ಹೈದರ್ ಆಲಿ ಚೊಕ್ಕಬೆಟ್ಟು ಕಾರ್ಯಕ್ರಮ ನಿರ್ವಹಿಸಿದರು. ಸಲ್ಮಾನ್ ನಾಯಿರಿ ವಂದಿಸಿದರು.







