ಟಿಕ್‌ಟಾಕ್ ಸಹಿತ 59 ಚೀನಾ ಆ್ಯಪ್‌ಗಳ ಮೇಲೆ ಶಾಶ್ವತ ನಿಷೇಧ ವಿಧಿಸಿದ ಭಾರತ

ಹೊಸದಿಲ್ಲಿ, ಜ. 26: ಟಿಕ್‌ಟಾಕ್, ವಿಚಾಟ್ ಸೇರಿದಂತೆ ಒಟ್ಟು 59 ಚೀನಾ ಆ್ಯಪ್‌ಗಳನ್ನು ಶಾಶ್ವತವಾಗಿ ನಿಷೇಧಿಸಿ ಕೇಂದ್ರ ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೊಸ ನೋಟಿಸು ಜಾರಿ ಮಾಡಿದೆ.
ಜೂನ್‌ನಲ್ಲಿ ಮೊದಲ ಬಾರಿಗೆ ನಿಷೇಧ ವಿಧಿಸುವಾಗ ಭಾರತ ಸರಕಾರ ಖಾಸಗಿತನ ಹಾಗೂ ಭದ್ರತಾ ಅವಶ್ಯಕತೆಗಳ ಅನುಸರಣೆ ಬಗ್ಗೆ ತಮ್ಮ ನಿಲುವು ವಿವರಿಸುವಂತೆ ಈ 59 ಆ್ಯಪ್‌ಗಳಿಗೆ ಸೂಚಿಸಿತ್ತು. ಪಟ್ಟಿಯಲ್ಲಿರುವ ಪ್ರಶ್ನೆಗಳಿಗೆ ಉತ್ತರಿಸುವಂತೆ ಕೋರಿದ ಕಂಪೆನಿಗಳಲ್ಲಿ ಬೈಟ್‌ಡಾನ್ಸ್‌ನ ಜನಪ್ರಿಯ ವೀಡಿಯೊ ಹಂಚಿಕೆ ಆ್ಯಪ್ ಟಿಕ್‌ಟಾಕ್, ಟೆನ್ಸೆಂಟ್ ಹೋಲ್ಡಿಂಗ್‌ನ ವಿಚಾಟ್ ಹಾಗೂ ಅಲಿಬಾಬಾದ ಯುಸಿ ಬ್ರೌಸರ್ ಕೂಡ ಸೇರಿತ್ತು. ಈ ಕಂಪೆನಿಗಳು ನೀಡಿದ ಪ್ರತಿಕ್ರಿಯೆ, ವಿವರಣೆ ಸರಕಾರಕ್ಕೆ ತೃಪ್ತಿ ತಂದಿಲ್ಲ. ಆದುದರಿಂದ 59 ಆ್ಯಪ್‌ಗಳ ಮೇಲೆ ಕೇಂದ್ರ ಸರಕಾರ ಶಾಶ್ವತ ನಿಷೇಧ ಹೇರಿದೆ ಎಂದು ನೋಟಿಸಿನ ಬಗ್ಗೆ ಅರಿವಿರುವ ಮೂಲವನ್ನು ಉಲ್ಲೇಖಿಸಿ ಲೈವ್‌ಮಿಂಟ್ ವರದಿ ಮಾಡಿದೆ.
ನೋಟಿಸ್ ಅನ್ನು ಕಳೆದ ವಾರ ಜಾರಿಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆ್ಯಪ್‌ಗಳು ಭಾರತದ ಸಾರ್ವಭೌಮತೆ, ಸಮಗ್ರತೆ ಹಾಗೂ ಭದ್ರತೆ ಬಗ್ಗೆ ಪೂರ್ವಾಗ್ರಹ ಹೊಂದಿದೆ ಎಂದು ಸಚಿವಾಲಯ ಜೂನ್‌ನಲ್ಲಿ ನೀಡಿದ ಆದೇಶ ಹೇಳಿತ್ತು. ಸರಕಾರ ಈ ಆ್ಯಪ್‌ಗಳನ್ನು 2020 ಜೂನ್‌ನಲ್ಲಿ ನಿಷೇಧಿಸಿತ್ತು. ಈಗ ಈ ಆ್ಯಪ್‌ಗಳನ್ನು ಶಾಶ್ವತವಾಗಿ ನಿಷೇಧಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ಹೇಳಿದೆ.





