ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಂದ ಪತ್ನಿಗೆ ಕಿರಕುಳ: ಆರೋಪ
ಬೆಂಗಳೂರು, ಜ.26: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಅವರು ಪತ್ನಿಗೆ ಕಿರಕುಳ ನೀಡಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಇಲ್ಲಿನ ಆರ್‍ಆರ್ ನಗರ ಠಾಣಾ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ವರದಕ್ಷಿಣೆ ಕಿರುಕುಳ ಮತ್ತು ಕೊಲೆಗೆ ಯತ್ನ ಆರೋಪ ಸಂಬಂಧ ಆರ್‍ಆರ್ ನಗರ ಪೊಲೀಸ್ ಠಾಣೆಯಲ್ಲಿ ದಿನೇಶ್ ವಿರುದ್ಧ ಅವರ ಪತ್ನಿ ದೂರು ಸಲ್ಲಿಸಿದ್ದರು ಎಂದು ತಿಳಿದುಬಂದಿದೆ. ದೂರಿನನ್ವಯ ಪೊಲೀಸರು ವಿಚಾರಣೆ ನಡೆಸಲಿದ್ದಾರೆ.
ಇತ್ತೀಚಿಗೆ ದಿನೇಶ್ ಕುಮಾರ್ ಅವರ ಪತ್ನಿ ದೀಪ್ತಿ ಅವರು, ಪತಿ ಹಾಗೂ ಅವರ ಸೋದರನ ಪತ್ನಿ ವಿರುದ್ಧ ದೂರು ನೀಡಿದ್ದರು. ತಮಗೆ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿರುವುದಲ್ಲದೆ ತೀವ್ರ ಹಿಂಸೆ ನೀಡುತ್ತಿರುವುದಾಗಿ ಆರೋಪಿಸಿದ್ದರು ಎಂದು ಹೇಳಲಾಗುತ್ತಿದೆ.
ಇನ್ನು ಮೂರು ದಿನಗಳಿಂದ ದಿನೇಶ್ ಕುಮಾರ್ ಅವರ ಮೊಬೈಲ್ ಸಂಪರ್ಕ ಕಡಿತ ಆಗಿದೆ. ಆದರೂ, ಅವರ ಮನೆಗೆ ನೋಟಿಸ್ ಕಳುಹಿಸಿ ತನಿಖಾಧಿಕಾರಿ ಮುಂದೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗುವುದೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.





