ವರ್ಷದ ಹೆಚ್ಚಿನ ಭಾಗ ಮುಚ್ಚಿಯೇ ಇರುವ ನ್ಯೂಝಿಲ್ಯಾಂಡ್ ಗಡಿ: ಪ್ರಧಾನಿ ಜಸಿಂಡಾ ಆರ್ಡರ್ನ್ ಘೋಷಣೆ

ವೆಲಿಂಗ್ಟನ್ (ನ್ಯೂಝಿಲ್ಯಾಂಡ್), ಜ. 26: ಜಾಗತಿಕ ಮಟ್ಟದಲ್ಲಿ ಕೊರೋನ ವೈರಸ್ ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾಗಿರುವಂತೆಯೇ, ನ್ಯೂಝಿಲ್ಯಾಂಡ್‌ನ ಗಡಿಗಳು ಈ ವರ್ಷದ ಹೆಚ್ಚಿನ ಭಾಗ ಮುಚ್ಚಿಯೇ ಇರುವ ಸಾಧ್ಯತೆಯಿದೆ ಎಂಬ ಎಚ್ಚರಿಕೆಯನ್ನು ಪ್ರಧಾನಿ ಜಸಿಂಡಾ ಆರ್ಡರ್ನ್ ಮಂಗಳವಾರ ನೀಡಿದ್ದಾರೆ.
ನ್ಯೂಝಿಲ್ಯಾಂಡ್‌ನಲ್ಲಿ ಎರಡು ತಿಂಗಳಿಗೂ ಹೆಚ್ಚಿನ ಅವಧಿಯಲ್ಲಿ ಮೊದಲ ಬಾರಿಗೆ ಕಳೆದ ವಾರಾಂತ್ಯದಲ್ಲಿ ಕೊರೋನ ವೈರಸ್ ಸೋಂಕು ಪ್ರಕರಣವೊಂದು ವರದಿಯಾಗಿರುವುದು, ಕೊರೋನ ವೈರಸ್‌ನ ಬೆದರಿಕೆ ಈಗಲೂ ಇದೆ ಎನ್ನುವುದನ್ನು ಸೂಚಿಸಿದೆ ಎಂದು ಜಸಿಂಡಾ ಹೇಳಿದರು.
ಕಳೆದ ವರ್ಷ ಮಾರ್ಚ್‌ನಿಂದೀಚೆಗೆ ವಾಪಸ್ ಬರುವ ನಾಗರಿಕರಿಗೆ ಹೊರತುಪಡಿಸಿ ಇತರ ಎಲ್ಲರಿಗೂ ನ್ಯೂಝಿಲ್ಯಾಂಡ್‌ನ ಗಡಿಗಳನ್ನು ಮುಚ್ಚಲಾಗಿದೆ. ಕೊರೋನ ವೈರಸ್ ಈಗಲೂ ಜಗತ್ತಿನಾದ್ಯಂತ ಸಕ್ರಿಯವಾಗಿರುವಾಗ, ಸರಕಾರವು ಗಡಿಗಳನ್ನು ಮರುತೆರೆಯುವುದಿಲ್ಲ ಎಂದರು.
‘‘ನಮ್ಮ ಸುತ್ತಲೂ ಇರುವ ಜಗತ್ತಿನಲ್ಲಿ ಅಪಾಯ ಹಾಗೇ ಇರುವಾಗ ಹಾಗೂ ಲಸಿಕೆಗಳ ಜಾಗತಿಕ ವಿತರಣೆಯ ಬಗ್ಗೆ ಅನಿಶ್ಚಿತತೆ ಇರುವಾಗ, ಈ ವರ್ಷದ ಹೆಚ್ಚಿನ ಭಾಗ ನಮ್ಮ ಗಡಿಗಳು ಮುಚ್ಚಿಯೇ ಇರುವ ಸಾಧ್ಯತೆಯಿದೆ’’ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಿಳಿಸಿದರು.







