ದಿಲ್ಲಿ ರೈತರ ಹೋರಾಟ ಬೆಂಬಲಿಸಿ ಮಂಡ್ಯದಲ್ಲಿ ಪ್ರತಿಭಟನೆ: ರೈತಪರ ಸಂಘಟನೆಗಳಿಂದ ಟ್ರ್ಯಾಕ್ಟರ್ ಪರೇಡ್

ಮಂಡ್ಯ, ಜ.26: ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ ರೈತರ ಹೋರಾಟ ಬೆಂಬಲಿಸಿ ರೈತ ಸಂಘ ಹಾಗೂ ರೈತಪರ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಟ್ರ್ಯಾಕ್ಟರ್ ಪರೇಡ್ ನಡೆಸಿದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ದೆಹಲಿಯಲ್ಲಿ ಎರಡು ತಿಂಗಳಿಂದ ರೈತರು ಪ್ರತಿಭಟನೆ ಮಾಡುತ್ತಿದ್ದರೂ, ಪ್ರಧಾನಿ ಮೋದಿ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಪಿಎಂಸಿ ಕಾಯ್ದೆಗೆ ಕೇಂದ್ರ ಸರಕಾರ ತಂದಿರುವ ತಿದ್ದುಪಡಿಯಿಂದ ಎಪಿಎಂಸಿಗಳು ಮುಚ್ಚುತ್ತವೆ. ಕೃಷಿ ಗುತ್ತಿಗೆ ಪದ್ಧತಿಯಿಂದ ರೈತರು ತಮ್ಮ ಜಮೀನುಗಳಲ್ಲಿ ತಾವೇ ಕೂಲಿಗಳಾಗಿ ದುಡಿಯುವಂತಹ ಪರಿಸ್ಥಿತಿ ಬರುತ್ತದೆ. ಆದ್ದರಿಂದ ಮೂರು ಕೃಷಿ ಕಾಯ್ದೆಗಳನ್ನು ಕೇಂದ್ರ ಸರಕಾರ ಹಿಂದಕ್ಕೆ ಪಡೆಯಬೇಕು. ಜತೆಗೆ ರಾಜ್ಯ ಸರಕಾರ ಜಾರಿಗೆ ತಂದಿರುವ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯಬೇಕು ಎಂದು ಅವರು ಆಗ್ರಹಿಸಿದರು.
ರೈತ ಸಂಘದ ಮುಖಂಡರಾದ ಬೋರಾಪುರ ಶಂಕರೇಗೌಡ, ಇಂಡುವಾಳು ಚಂದ್ರಶೇಖರ್, ಮಂಜೇಶ್‍ಗೌಡ, ಸುನಂದಾ ಜಯರಾಂ, ಕೋಡಿಹಳ್ಳಿ ಚಂದ್ರು, ಎಳೇಗೌಡ, ಪ್ರಗತಿರ ಸಂಘಟನೆಗಳ ಎಂ.ಬಿ.ನಾಗಣ್ಣಗೌಡ, ವಕೀಲ ಬಿ.ಟಿವಿಶ್ನಾಥ್, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.





