ಕೋವಿಡ್-19 ಲಸಿಕೆ ವಿತರಣೆ ದಿನದಿಂದ ದಿನಕ್ಕೆ ಶ್ರೀಮಂತ, ಬಡ ದೇಶಗಳ ನಡುವಿನ ಅಂತರ ಹೆಚ್ಚಳ
ವಿಶ್ವ ಆರೋಗ್ಯ ಸಂಸ್ಥೆ ಕಳವಳ

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಜ. 26: ಕೋವಿಡ್-19 ಲಸಿಕೆ ವಿತರಣೆಯಲ್ಲಿ ಶ್ರೀಮಂತ ಮತ್ತು ಬಡ ದೇಶಗಳ ನಡುವಿನ ಅಂತರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸೋಮವಾರ ಎಚ್ಚರಿಸಿದೆ. ಲಸಿಕೆಗಳ ಡೋಸ್‌ಗಳ ನ್ಯಾಯೋಚಿತ ವಿತರಣೆ ಸಾಧ್ಯವಾಗದಿದ್ದರೆ ಜಾಗತಿಕ ಆರ್ಥಿಕತೆಯು ಟ್ರಿಲಿಯಗಟ್ಟಲೆ ಡಾಲರ್‌ಗಳನ್ನು ಕಳೆದುಕೊಳ್ಳಬಹುದಾಗಿದೆ ಎಂದು ಅದು ಅಭಿಪ್ರಾಯಪಟ್ಟಿದೆ.
ಕೊರೋನ ವೈರಸ್ ಸಾಂಕ್ರಾಮಿಕವನ್ನು ಹಿಮ್ಮೆಟ್ಟಿಸುವುದಕ್ಕಾಗಿ ಚಿಕಿತ್ಸೆಗಳು, ಪರೀಕ್ಷೆಗಳು ಮತ್ತು ಲಸಿಕೆಗಳ ಅಭಿವೃದ್ಧಿ, ಸಂಗ್ರಹ ಮತ್ತು ಸಮಾನ ವಿತರಣೆಯನ್ನು ತ್ವರಿತಗೊಳಿಸುವ ಉದ್ದೇಶದ ಕಾರ್ಯಕ್ರಮಕ್ಕೆ ಈ ವರ್ಷ 26 ಬಿಲಿಯ ಡಾಲರ್ (ಸುಮಾರು 1.90 ಲಕ್ಷ ಕೋಟಿ ರೂಪಾಯಿ)ನ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್ ಹೇಳಿದರು.
‘‘ಶ್ರೀಮಂತ ದೇಶಗಳು ಲಸಿಕೆಗಳನ್ನು ನೀಡುತ್ತಿವೆ. ಆದರೆ, ಜಗತ್ತಿನ ಕನಿಷ್ಠ ಅಭಿವೃದ್ಧಿಹೊಂದಿದ ದೇಶಗಳು ಕಾಯುತ್ತಿವೆ’’ ಎಂದು ಅವರು ವಿಷಾದಿಸಿದರು.
‘‘ಒಂದೊಂದು ದಿನ ಉರುಳಿದಂತೆ, ಜಗತ್ತಿನ ಉಳ್ಳವರು ಮತ್ತು ಇಲ್ಲದವರ ನಡುವಿನ ಅಂತರವು ಬೆಳೆಯುತ್ತಿದೆ’’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನುಡಿದರು.
‘‘ಲಸಿಕಾ ರಾಷ್ಟ್ರೀಯತೆಯು ಕಿರು ಅವಧಿಯ ರಾಜಕೀಯ ಗುರಿಗಳನ್ನು ಸಾಧಿಸಬಹುದು. ಆದರೆ, ಸಮಾನ ಲಸಿಕೆ ವಿತರಣೆಗೆ ಬೆಂಬಲಿಸುವುದರಲ್ಲಿ ಪ್ರತಿಯೊಂದು ದೇಶದ ಮಧ್ಯಮ ಮತ್ತು ದೀರ್ಘಾವಧಿಯ ಆರ್ಥಿಕ ಹಿತಾಸಕ್ತಿ ಅಡಗಿದೆ’’ ಎಂದರು.







