ವುಹಾನ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಪರಿಣತರ ಭೇಟಿ
ನಮ್ಮ ಬಾಯಿ ಮುಚ್ಚಿಸಲು ಯತ್ನ: ಕೊರೋನ ವೈರಸ್ಗೆ ಬಲಿಯಾದವರ ಸಂಬಂಧಿಕರಿಂದ ಆರೋಪ

ಸಾಂದರ್ಭಿಕ ಚಿತ್ರ
ವುಹಾನ್ (ಚೀನಾ), ಜ. 27: ಕೊರೋನ ವೈರಸ್ ಸಾಂಕ್ರಾಮಿಕದ ಮೂಲದ ಬಗ್ಗೆ ತನಿಖೆ ನಡೆಸಲು ವಿಶ್ವ ಆರೋಗ್ಯ ಸಂಸ್ಥೆಯ ಪರಿಣತರ ತಂಡವೊಂದು ವುಹಾನ್ ನಗರದಲ್ಲಿರುವ ಅವಧಿಯಲ್ಲಿ, ಚೀನಾದ ಅಧಿಕಾರಿಗಳು ನಮ್ಮ ಸಾಮಾಜಿಕ ಮಾಧ್ಯಮ ಗುಂಪನ್ನು ಡಿಲೀಟ್ ಮಾಡಿದ್ದಾರೆ ಹಾಗೂ ಮೌನವಾಗಿರುವಂತೆ ನಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ವುಹಾನ್ನಲ್ಲಿ ಕೊರೋನ ವೈರಸ್ಗೆ ಬಲಿಯಾದವರ ಸಂಬಂಧಿಕರು ಬುಧವಾರ ಹೇಳಿದ್ದಾರೆ.
ಕೊರೋನ ವೈರಸ್ನಿಂದಾಗಿ ಪ್ರಾಣ ಕಳೆದುಕೊಂಡವರ ಹಲವಾರು ಸಂಬಂಧಿಕರು ಆನ್ಲೈನ್ನಲ್ಲಿ ಜೊತೆಯಾಗಿದ್ದು, ಕೊರೋನ ವೈರಸ್ನಿಂದ ಸಂಭವಿಸಿದ ಸಾವುಗಳಿಗೆ ವುಹಾನ್ ನಗರದ ಅಧಿಕಾರಿಗಳನ್ನು ಹೊಣೆಯಾಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಒಂದು ವರ್ಷದ ಹಿಂದೆ ನಗರದಲ್ಲಿ ಸ್ಫೋಟಗೊಂಡ ಸಾಂಕ್ರಾಮಿಕವನ್ನು ಅಧಿಕಾರಿಗಳು ತಪ್ಪಾಗಿ ನಿಭಾಯಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಅಧಿಕಾರಿಗಳ ಮೇಲೆ ಉತ್ತರದಾಯಿತ್ವ ನಿಗದಿಪಡಿಸುವ ನಮ್ಮ ಪ್ರಯತ್ನಗಳಿಗೆ ತಡೆಯೊಡ್ಡಲಾಗುತ್ತಿದೆ, ನಮ್ಮ ಸಾಮಾಜಿಕ ಮಾಧ್ಯಮ ಗುಂಪುಗಳ ಮೇಲೆ ನಿಗಾ ಇಡಲಾಗುತ್ತಿದೆ ಹಾಗೂ ನಮಗೆ ಬೆದರಿಕೆಯೊಡ್ಡಲಾಗುತ್ತಿದೆ ಎಂದು ಮೃತರ ಸಂಬಂಧಿಕರು ಹೇಳಿದ್ದಾರೆ.
51 ವರ್ಷದ ಝಾಂಗ್ರ ತಂದೆ ಕಳೆದ ವರ್ಷದ ಆರಂಭದಲ್ಲಿ ಕೊರೋನ ವೈರಸ್ಗೆ ಬಲಿಯಾಗಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಪರಿಣತರು ಜನವರಿ 14ರಂದು ವುಹಾನ್ಗೆ ಆಗಮಿಸಿದ್ದಾರೆ. 14 ದಿನಗಳ ಕ್ವಾರಂಟೈನ್ ಬಳಿಕ, ಗುರುವಾರ ಅವರು ತಮ್ಮ ತನಿಖೆಯನ್ನು ಆರಂಭಿಸುವ ನಿರೀಕ್ಷೆಯಿದೆ.
‘‘ವಿಶ್ವ ಆರೋಗ್ಯ ಸಂಸ್ಥೆಯ ಪರಿಣತರು ವುಹಾನ್ಗೆ ಆಗಮಿಸಿದ ಬಳಿಕ, ಅಧಿಕಾರಿಗಳು ನಮ್ಮ ಸಾಮಾಜಿಕ ಮಾಧ್ಯಮ ಗುಂಪನ್ನು ಡಿಲೀಟ್ ಮಾಡಿದರು. ಅದರ ಪರಿಣಾಮವಾಗಿ ಗುಂಪಿನ ಹೆಚ್ಚಿನ ಸದಸ್ಯರೊಂದಿಗೆ ನಾವು ಸಂಪರ್ಕ ಕಳೆದುಕೊಂಡಿದ್ದೇವೆ’’ ಎಂದು ಝಾಂಗ್ ನುಡಿದರು.
ಸಾಮಾಜಿಕ ಮಾಧ್ಯಮ ಗುಂಪು ಡಿಲೀಟ್!
ಕೊರೋನ ವೈರಸ್ಗೆ ಬಲಿಯಾದ 80ರಿಂದ 100 ಮಂದಿಯ ಸಂಬಂಧಿಕರು ಒಂದು ವರ್ಷದಿಂದ ಬಳಸುತ್ತಿರುವ ‘ವೀ ಚಾಟ್’ ಸಾಮಾಜಿಕ ಮಾಧ್ಯಮ ಗುಂಪೊಂದನ್ನು ಯಾವುದೇ ವಿವರಣೆ ನೀಡದೆ ಸುಮಾರು 10 ದಿನಗಳ ಹಿಂದೆ ಡಿಲೀಟ್ ಮಾಡಲಾಗಿದೆ ಎಂದು ಗುಂಪಿನ ಸದಸ್ಯ ಝಾಂಗ್ ಹೈ ಆರೋಪಿಸಿದರು.
‘‘ಚೀನಾದ ಅಧಿಕಾರಿಗಳು ಬೆದರಿದ್ದಾರೆ ಎನ್ನುವುದನ್ನು ಇದು ತೋರಿಸುತ್ತದೆ. ಮೃತರ ಕುಟುಂಬ ಸದಸ್ಯರು ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಗಳನ್ನು ಸಂಪರ್ಕಿಸುತ್ತಾರೆ ಎಂಬುದಾಗಿ ಅವರು ಹೆದರಿದ್ದಾರೆ ಎಂದು ಝಾಂಗ್ ನುಡಿದರು.