ಬೋಯಿಂಗ್ 737 ಮ್ಯಾಕ್ಸ್ ಹಾರಾಟಕ್ಕೆ ಯುರೋಪ್ ಅನುಮೋದನೆ
ಪ್ಯಾರಿಸ್, ಜ. 27: ಯುರೋಪ್‌ನ ಆಕಾಶದಲ್ಲಿ ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳ ಹಾರಾಟಕ್ಕೆ ಅನುಮೋದನೆ ನೀಡಿರುವುದಾಗಿ ಯುರೋಪಿಯನ್ ಒಕ್ಕೂಟದ ವಾಯುಯಾನ ಸುರಕ್ಷತಾ ಸಂಸ್ಥೆ (ಇಎಎಸ್‌ಎ) ಬುಧವಾರ ತಿಳಿಸಿದೆ.
ಎರಡು ಭೀಕರ ಅಪಘಾತಗಳ ಹಿನ್ನೆಲೆಯಲ್ಲಿ ವಿಮಾನವನ್ನು ಹಾರಾಟದಿಂದ ಹೊರಗಿಟ್ಟ 22 ತಿಂಗಳುಗಳ ಬಳಿಕ ಈ ಬೆಳವಣಿಗೆ ನಡೆದಿದೆ.
‘‘ಇಎಎಸ್‌ಎ ನಡೆಸಿದ ವಿವರವಾದ ವಿಶ್ಲೇಷಣೆಗಳ ಬಳಿಕ, ಬೋಯಿಂಗ್ 737 ಮ್ಯಾಕ್ಸ್ ವಿಮಾನವು ಸೇವೆಗೆ ಸುರಕ್ಷಿತವಾಗಿ ಮರಳಬಹುದಾಗಿದೆ ಎಂಬ ನಿರ್ಧಾರಕ್ಕೆ ನಾವು ಬಂದಿದ್ದೇವೆ’’ ಎಂದು ಇಎಎಸ್‌ಎ ನಿರ್ದೇಶಕ ಪ್ಯಾಟ್ರಿಕ್ ಕೈ ಹೇಳಿಕೆಯೊಂದರಲ್ಲಿ ತಿಳಿಸಿದರು.
2018ರಲ್ಲಿ ಇಂಡೋನೇಶ್ಯದ ಲಯನ್ ಏರ್ ವಿಮಾನಯಾನ ಸಂಸ್ಥೆಗೆ ಸೇರಿದ ಬೋಯಿಂಗ್ 737 ಮ್ಯಾಕ್ಸ್ ವಿಮಾನ ಸಮುದ್ರಕ್ಕೆ ಅಪ್ಪಳಿಸಿತ್ತು. 2019ರಲ್ಲಿ ಇಥಿಯೋಪಿಯ ಏರ್‌ಲೈನ್ಸ್‌ಗೆ ಸೇರಿದ ಅದೇ ಮಾದರಿಯ ವಿಮಾನ ಹಾರಾಟ ಆರಂಭಿಸಿದ ಸ್ವಲ್ಪವೇ ಹೊತ್ತಿನಲ್ಲಿ ಪತನಗೊಂಡಿತ್ತು. ಈ ಎರಡು ವಿಮಾನ ಅಪಘಾತಗಳಲ್ಲಿ ಒಟ್ಟು 346 ಮಂದಿ ಮೃತಪಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ 2019 ಮಾರ್ಚ್‌ನಲ್ಲಿ ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳನ್ನು ಸೇವೆಯಿಂದ ಹೊರಗಿಡಲಾಗಿತ್ತು.







