ಇನ್ನು ಎಚ್-1ಬಿ ವೀಸಾದಾರರ ಸಂಗಾತಿಗಳಿಗೂ ಉದ್ಯೋಗಾರ್ಹತೆ: ಟ್ರಂಪ್ ಆದೇಶ ಹಿಂದಕ್ಕೆ ಪಡೆದ ಬೈಡನ್

ವಾಶಿಂಗ್ಟನ್, ಜ. 28: ಎಚ್-4 ವೀಸಾದಾರರಿಗೆ ಉದ್ಯೋಗ ಪರ್ಮಿಟ್‌ಗಳನ್ನು ನೀಡುವುದನ್ನು ನಿಷೇಧಿಸುವ ನಿಕಟಪೂರ್ವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಆದೇಶವನ್ನು ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ಬುಧವಾರ ವಾಪಸ್ ಪಡೆದಿದ್ದಾರೆ.
ಎಚ್-1ಬಿ ವೀಸಾದಾರರ ಸಂಗಾತಿಗಳಿಗೆ ಎಚ್-4 ವೀಸಾಗಳನ್ನು ನೀಡಲಾಗುತ್ತದೆ. ಹೊಸ ಆದೇಶದ ಫಲಾನುಭವಿಗಳ ಪೈಕಿ ಹೆಚ್ಚಿನವರು ಉನ್ನತ ಕೌಶಲ ಹೊಂದಿರುವ ಭಾರತೀಯ ಮಹಿಳೆಯರಾಗಿರುತ್ತಾರೆ.
ಅಮೆರಿಕದ ತಂತ್ರಜ್ಞಾನ ಕಂಪೆನಿಗಳು ಪ್ರತಿವರ್ಷ ಸಾವಿರಾರು ವಿದೇಶೀಯರನ್ನು ಎಚ್-1ಬಿ ವೀಸಾದಡಿಯಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುತ್ತವೆ. ಈ ಪೈಕಿ ಹೆಚ್ಚಿನವರು ಭಾರತ ಮತ್ತು ಚೀನಾದ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳು.
ಎಚ್-4 ವೀಸಾದಾರರ ಉದ್ಯೋಗ ಅರ್ಹತೆಯನ್ನು ರದ್ದುಪಡಿಸುವ ಟ್ರಂಪ್ ಆದೇಶವನ್ನು ಹಿಂದಕ್ಕೆ ಪಡೆದುಕೊಳ್ಳಲಾಗುತ್ತಿದೆ ಎಂದು ನಿರ್ವಹಣೆ ಮತ್ತು ಬಜೆಟ್ ಕಚೇರಿ ಹಾಗೂ ಮಾಹಿತಿ ಮತ್ತು ನಿಯಂತ್ರಣ ವ್ಯವಹಾರಗಳ ಕಚೇರಿ ಇತ್ತೀಚೆಗೆ ತಿಳಿಸಿದೆ.
2017ರಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಟ್ರಂಪ್ ಸರಕಾರ ಒಬಾಮ ಕಾಲದ ಆದೇಶವನ್ನು ರದ್ದುಪಡಿಸಿತ್ತು.





