ಅದಾನಿ ಗ್ರೂಪ್ ಮಾನಹಾನಿ ಪ್ರಕರಣ: ಪತ್ರಕರ್ತ ಠಾಕೂರತಾ ವಿರುದ್ಧ ಬಂಧನ ವಾರಂಟ್ ಅಮಾನತು

ಹೊಸದಿಲ್ಲಿ,ಜ.28: ಅದಾನಿ ಗ್ರೂಪ್ 2017ರಲ್ಲಿ ದಾಖಲಿಸಿದ್ದ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತ ಪರಂಜಯ ಗುಹಾ ಠಾಕೂರತಾ ಅವರ ವಿರುದ್ಧ ಗುಜರಾತಿನ ಮುಂದ್ರಾ ನಗರದ ನ್ಯಾಯಾಲಯವು ಹೊರಡಿಸಿದ್ದ ಜಾಮೀನುರಹಿತ ಬಂಧನ ವಾರಂಟ್‌ನ್ನು ಗುಜರಾತ್ ಉಚ್ಚ ನ್ಯಾಯಾಲಯವು ಗುರುವಾರ ಅಮಾನತುಗೊಳಿಸಿದೆ.
ಈ ತಿಂಗಳ ಆದಿಯಲ್ಲಿ ಠಾಕೂರತಾ ವಿರುದ್ಧ ಮಾನಹಾನಿ ಆರೋಪವನ್ನು ರೂಪಿಸಿದ್ದ ಮುಂದ್ರಾ ನ್ಯಾಯಾಲಯವು ಅವರನ್ನು ತನ್ನೆದುರು ಹಾಜರುಪಡಿಸುವಂತೆ ದಿಲ್ಲಿಯ ನಿಝಾಮುದ್ದೀನ್ ಪೊಲೀಸರಿಗೆ ಆದೇಶಿಸಿತ್ತು. ಠಾಕೂರತಾ ಅವರು ನ್ಯಾಯಾಲಯಕ್ಕೆ ಹಾಜರಾಗಲು ವಿಫಲಗೊಂಡಿದ್ದ ಹಿನ್ನೆಲೆಯಲ್ಲಿ ಅವರ ವಿರುದ್ಧ ವಾರಂಟ್ ಹೊರಡಿಸಲಾಗಿತ್ತು. ಇಕಾನಾಮಿಕ್ ಆ್ಯಂಡ್ ಪಾಲಿಟಿಕಲ್ ವೀಕ್ಲಿ ಮತ್ತು ದಿ ವೈರ್‌ನಲ್ಲಿ ಅದಾನಿ ಗ್ರೂಪ್ ಕುರಿತು ಪ್ರಕಟವಾಗಿದ್ದ ಎರಡು ಲೇಖನಗಳಿಗೆ ಪ್ರಕರಣವು ಸಂಬಂಧಿಸಿದೆ. ಅದಾನಿ ಗ್ರೂಪ್‌ಗೆ ಅನುಕೂಲ ಕಲ್ಪಿಸಲು ಕೇಂದ್ರ ಸರಕಾರವು ವಿಶೇಷ ಆರ್ಥಿಕ ವಲಯ ನಿಯಮಗಳಿಗೆ ತಿದ್ದುಪಡಿಯನ್ನು ತಂದಿದೆ ಮತ್ತು ಇದರಿಂದಾಗಿ ಅದಾನಿ ಗ್ರೂಪ್ 500 ಕೋ.ರೂ.ಗಳ ಲಾಭ ಗಳಿಸಿದೆ ಎಂದು ಲೇಖನಗಳಲ್ಲಿ ಆರೋಪಿಸಲಾಗಿತ್ತು.





