ಸಹಕಾರಿ ಬ್ಯಾಂಕ್ ಗಳಲ್ಲಿ ನಕಲಿ ಚಿನ್ನ ಅಡವಿಟ್ಟು ವಂಚನೆ ಪ್ರಕರಣ : ಇಬ್ಬರು ವಶಕ್ಕೆ
ಫ್ಯಾನ್ಸಿ ಆಭರಣಕ್ಕೆ ಕೋಟಿಂಗ್ ಚಿನ್ನ ಲೇಪಿಸುತ್ತಿದ್ದ ಚಾಲಾಕಿಗಳು !

ಸಾಂದರ್ಭಿಕ ಚಿತ್ರ
ಮಂಗಳೂರು, ಜ. 28: ತಾಲೂಕಿನ ವಿವಿಧ ಸಹಕಾರಿ ಬ್ಯಾಂಕ್ಗಳಲ್ಲಿ ನಕಲಿ ಚಿನ್ನ ಅಡವಿಟ್ಟು 50 ಲಕ್ಷ ರೂ.ಗೂ ಅಧಿಕ ಮೊತ್ತ ವಂಚನೆ ಮಾಡಿದ ಆರೋಪ ಕೇಳಿ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ಮಂಗಳೂರು ಮೂಲದ ಸಾದಿಕ್ ಸಹಿತ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದಲ್ಲಿ ಮತ್ತಷ್ಟು ಮಂದಿಯ ಮೇಲೆ ಶಂಕೆ ಇದ್ದು, ಅವರಿಗೆ ಪೊಲೀಸ್ ಶೋಧ ಕಾರ್ಯ ಮುಂದುವರಿದಿದೆ.
ಉಪ್ಪಿನಂಗಡಿಯಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟ ಪ್ರಕರಣ ಇತ್ತೀಚೆಗೆ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮುಡಿಪು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಚಿನ್ನವನ್ನು ಬುಧವಾರ ಪರಿಶೀಲನೆ ನಡೆಸಿದಾಗ ಅದರಲ್ಲಿ ನಕಲಿ ಚಿನ್ನವಿರುವುದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಇದನ್ನು ಗಂಭೀರವಾಗಿ ಪರಿಗಣಿಸಿದ ಸಿಬ್ಬಂದಿಯು ಸಾದಿಕ್ ಎಂಬವರಿಗೆ ಸಹಿ ನೆಪದಲ್ಲಿ ಉಪಾಯದಿಂದ ಕಚೇರಿಗೆ ಬರಲು ಹೇಳಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಇದಾದ ಬಳಿಕ ಗುರುವಾರ ಆತ್ಮಶಕ್ತಿಯ ಬೆಂದೂರ್ವೆಲ್ ಕೇಂದ್ರ ಕಚೇರಿಯಲ್ಲಿ ಚಿನ್ನಾಭರಣ ಪರಿಶೀಲನೆ ನಡೆಸಿದಾಗ ಇನ್ನೊಂದು ಪ್ರಕರಣ ಬಯಲಿಗೆ ಬಂದಿದ್ದು, ಈ ಪ್ರಕರಣದಲ್ಲಿ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎರಡನೇ ಪ್ರಕರಣದಲ್ಲಿಯೂ ಸಿಬ್ಬಂದಿ ಉಪಾಯದಿಂದ ಕಚೇರಿಗೆ ಬರಲು ಹೇಳಿ ಪೊಲೀಸರಿಗೊಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.
ವಶದಲ್ಲಿರುವವ ಶಂಕಿತರ ವಿರುದ್ಧ ವಿವಿಧ ಸಹಕಾರಿ ಬ್ಯಾಂಕ್ನಲ್ಲಿ ನಕಲಿ ಚಿನ್ನ ಅಡವಿಟ್ಟು ಸಾಲ ಪಡೆದ ಆರೋಪವಿದೆ. ವಶಕ್ಕೆ ಪಡೆದ ಇಬ್ಬರ ವಿರುದ್ಧವೂ ಅಪರಾಧದ ಹಿನ್ನೆಲೆ ಇದೆ. ಈಗಾಗಲೇ ಕೊಣಾಜೆಯಲ್ಲಿ 3, ಉಳ್ಳಾಲದಲ್ಲಿ 2, ಕಂಕನಾಡಿಯಲ್ಲಿ 1 ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ತೀವ್ರಗೊಳಿಸಿದ್ದಾರೆ.
ಶಂಕಿತರು ಸಹಕಾರಿ ಬ್ಯಾಂಕ್ಗೆ ತರುವ ಚಿನ್ನ ಮೇಲ್ನೋಟಕ್ಕೆ ಅಪ್ಪಟ್ಟ ಚಿನ್ನದಂತೆ ಲೇಪನ ಮಾಡಲಾಗಿತ್ತು. ಫ್ಯಾನ್ಸಿ ಆಭರಣದ ಮೇಲೆ ಸುಮಾರು 3 ಕೋಟಿಂಗ್ ಚಿನ್ನ ಲೇಪ ಮಾಡಲಾಗುತ್ತದೆ. ಬ್ಯಾಂಕ್ನಲ್ಲಿ ಚಿನ್ನದ ಪರಿಶೀಲಿಸುವ ವ್ಯಕ್ತಿ ಮೇಲ್ಬಾಗದಲ್ಲಿ ಮಾತ್ರ ಚಿನ್ನ ಲೇಪವನ್ನು ನೋಡಿ ಸಾಲ ಮಂಜೂರಿಗೆ ಅನುಮತಿ ನೀಡುತ್ತಾರೆ. ಇದರಿಂದ ಒಳಭಾಗದಲ್ಲಿ ನಕಲಿ ಚಿನ್ನವಿರುವುದು ಗೊತ್ತೇ ಆಗುವುದಿಲ್ಲ ಎಂದು ತಿಳಿದುಬಂದಿದೆ.
ಪೊಲೀಸ್ ಆಯುಕ್ತರಿಗೆ ಮನವಿ: ಆತ್ಮ ಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಸಹಿತ ನಾನಾ ಸಹಕಾರಿ ಸಂಸ್ಥೆಗಳ ಆಡಳಿತ ಮುಖ್ಯಸ್ಥರು ಹಾಗೂ ಅಧಿಕಾರಿಗಳು ಗುರುವಾರ ಸಂಜೆ ಮಂಗಳೂರಿನ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರನ್ನು ಭೇಟಿ ಮಾಡಿ ತಮಗಾಗಿರುವ ವಂಚನೆ ಬಗ್ಗೆ ಮಾಹಿತಿ ನೀಡಿದರು.
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಸಹಕಾರಿ ಸಂಘಗಳಲ್ಲಿ ನಕಲಿ ಚಿನ್ನಾಭರಣವಿಟ್ಟು ವಂಚನೆ ಮಾಡಿರುವ ಬಗ್ಗೆ ನಾನಾ ಠಾಣೆಗಳಲ್ಲಿ 6 ಪ್ರಕರಣ ದಾಖಲಾಗಿವೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ತನಿಖೆ ಆರಂಭಗೊಂಡಿದೆ. ಈ ಪ್ರಕರಣದ ಹಿಂದೆ ಯಾರಿದ್ದಾರೆ ? ಇದರ ಮೂಲ ಯಾವುದು ? ಎಂಬ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸಿ ಪ್ರಕರಣವನ್ನು ಬಯಲಿಗೆಳೆಯಲಾಗುವುದು.
-ಎನ್. ಶಶಿಕುಮಾರ್, ಪೊಲೀಸ್ ಆಯುಕ್ತರು,







