ಉ.ಪ್ರ.: ದಲಿತ ಕುಟುಂಬದ ಮೇಲೆ ಹಲ್ಲೆ, ಅಂಬೇಡ್ಕರ್ ಪ್ರತಿಮೆಗೆ ಹಾನಿ

ಬಲ್ಲಿಯಾ, ಜ. 27: ದಲಿತ ಕುಟುಂಬವೊಂದರ ಮೇಲೆ ದಾಳಿ ನಡೆಸಿದ ಹಾಗೂ ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಹಾನಿ ಉಂಟು ಮಾಡಿದ ಘಟನೆ ಇಲ್ಲಿ ನಾಗ್ರಾ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ಗುರುವಾರ ಹೇಳಿದ್ದಾರೆ.
ತಾನು ಹಾಗೂ ತನ್ನ ಕುಟುಂಬ ಬುಧವಾರ ರಾತ್ರಿ ಅಗ್ಗಿಷ್ಟಿಕೆ (ಚಳಿ ಕಾಯಿಸಲು) ಸುತ್ತ ಕುಳಿತಿರುವಾಗ ಪ್ರಬಲ ಜಾತಿಗೆ ಸೇರಿದ ಜನರ ಗುಂಪೊಂದು ದಾಳಿ ನಡೆಸಿತು. ಅಲ್ಲದೆ, ಅಂಬೇಡ್ಕರ್ ಪಾರ್ಕ್‌ನಲ್ಲಿ ಸ್ಥಾಪಿಸಲಾಗಿದ್ದ ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಹಾನಿ ಉಂಟು ಮಾಡಿತು ಎಂದು ಸುರೇಶ್ ರಾಮ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಉಪ ಪೊಲೀಸ್ ಅಧೀಕ್ಷಕ ಸಂಜಯ್ ಯಾದವ್ ಹೇಳಿದ್ದಾರೆ. ಕನ್ವಾರ್ ಗ್ರಾಮದಲ್ಲಿ ನಡೆದ ಈ ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇವರಲ್ಲಿ ಮನೋಜ್ ಸಿಂಗ್ ಹಾಗೂ ರಾಮ್ ಪರ್ವೇಶ್ ಸಿಂಗ್ ಎಂದು ಗುರುತಿಸಲಾದ ಇಬ್ಬರನ್ನು ಬಂಧಿಸಲಾಗಿದೆ ಎಂದು ಯಾದವ್ ಅವರು ತಿಳಿಸಿದ್ದಾರೆ.
Next Story





