ಕೊರೋನ ನಿಯಂತ್ರಣದಲ್ಲಿ ಭಾರತ ಯಶಸ್ವಿ, ಫೆ.1ರಿಂದ ಈಜುಕೊಳ ನಿಷೇಧ ತೆರವು: ಡಾ ಹರ್ಷವರ್ಧನ್

ಹೊಸದಿಲ್ಲಿ, ಜ.28: ಕೋವಿಡ್-19 ಸೋಂಕು ಹರಡುವುದನ್ನು ಭಾರತ ಯಶಸ್ವಿಯಾಗಿ ತಡೆದಿದೆ. ದೇಶದ 146 ಜಿಲ್ಲೆಗಳಲ್ಲಿ ಕಳೆದ ಒಂದು ವಾರದಲ್ಲಿ, 18 ಜಿಲ್ಲೆಗಳಲ್ಲಿ ಎರಡು ವಾರಗಳಲ್ಲಿ ಹೊಸ ಸೋಂಕಿನ ಪ್ರಕರಣ ವರದಿಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಡಾ ಹರ್ಷವರ್ಧನ್ ಹೇಳಿದ್ದಾರೆ.
ಗುರುವಾರ ಬೆಳಿಗ್ಗಿನವರೆಗಿನ ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 12,000ಕ್ಕೂ ಕಡಿಮೆ ಸೋಂಕು ಪ್ರಕರಣ ವರದಿಯಾಗಿದೆ. 2.4 ಮಿಲಿಯ ಜನರಿಗೆ ಕೊರೋನ ಲಸಿಕೆ ನೀಡಲಾಗಿದೆ. ಭಾರತದಲ್ಲಿ ಕೊರೋನ ಸೋಂಕಿನ ನಕ್ಷೆ ಇಳಿಮುಖವಾಗಿದೆ. ಈ ಹಿನ್ನೆಲೆಯಲ್ಲಿ, ಈಜುಕೊಳ ಬಳಕೆಯ ಮೇಲಿದ್ದ ನಿಷೇಧವನ್ನು ಫೆ.1ರಿಂದ ತೆರವುಗೊಳಿಸಲಾಗುವುದು. ಸಿನೆಮಾ ಮಂದಿರ ಹಾಗೂ ಥಿಯೇಟರ್‌ಗಳು 50%ಕ್ಕಿಂತಲೂ ಹೆಚ್ಚು ಆಸನ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಬಹುದು. ಎಲ್ಲಾ ವಿಧದ ಪ್ರದರ್ಶನ ಸಭಾಂಗಣಗಳಿಗೆ ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗುವುದು ಎಂದು ಸಚಿವರು ಹೇಳಿದ್ದಾರೆ. ದೇಶದಲ್ಲಿ ಇದುವರೆಗೆ 10.7 ಮಿಲಿಯ ಜನರು ಸೋಂಕಿಗೆ ಒಳಗಾಗಿದ್ದು 1,53,847 ಸಾವು ಸಂಭವಿಸಿದೆ. ವಿಶ್ವದಲ್ಲಿ ಅತ್ಯಧಿಕ ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ ದ್ವಿತೀಯ ಸ್ಥಾನದಲ್ಲಿರುವ ಭಾರತದಲ್ಲಿ, ಉಳಿದ ದೇಶಗಳಿಗೆ ಹೋಲಿಸಿದರೆ ಕೊರೋನ ಸೋಂಕಿನ ಮರಣದ ಪ್ರಮಾಣ ಅತ್ಯಂತ ಕಡಿಮೆಯಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.
ದೇಶದ ಜನಸಂಖ್ಯೆಯ ಸುಮಾರು 55% ಜನರು ಈಗಾಗಲೇ ಸೋಂಕಿಗೆ ಒಳಗಾಗಿರಬಹುದು ಎಂದು ದೇಶದ ಪ್ರಮುಖ 3 ರೋಗನಿರ್ಣಯ ಕೇಂದ್ರಗಳಲ್ಲಿ ಒಂದಾಗಿರುವ ಥೈರೊಕ್ಯಾರ್ ಟೆಕ್ನಾಲಜೀಸ್ ಸಂಸ್ಥೆ ಹೇಳಿದೆ. ಸೋಂಕು ಹರಡದಂತೆ ತಡೆಯಲು ದೇಶದ ಜನಸಂಖ್ಯೆಯ ಕನಿಷ್ಟ 60ರಿಂದ 70%ದಷ್ಟು ಜನರಿಗೆ ಲಸಿಕೆ ನೀಡಬೇಕಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.





