ಧರ್ಮೇಗೌಡ, ಮನಗೂಳಿ ಸಹಿತ ಅಗಲಿದ ಗಣ್ಯರಿಗೆ ಉಭಯ ಸದನಗಳಲ್ಲಿ ಶ್ರದ್ಧಾಂಜಲಿ

ಬೆಂಗಳೂರು, ಜ.28: ವಿಧಾನ ಪರಿಷತ್ತಿನ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ, ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಂ.ಸಿ.ಮನಗೂಳಿ, ಮಾಜಿ ಶಾಸಕಿ ರೇಣುಕಾ ರಾಜೇಂದ್ರನ್ ಸೇರಿದಂತೆ ಇತ್ತೀಚೆಗೆ ಅಗಲಿದ ಗಣ್ಯರಿಗೆ ವಿಧಾನ ಮಂಡಲ ಉಭಯ ಸದನಗಳಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಗುರುವಾರ ವಿಧಾನ ಮಂಡಲ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಿದ ರಾಜ್ಯಪಾಲ ವಜೂಭಾಯಿ ವಾಲಾ ಅವರನ್ನು ಬೀಳ್ಕೋಟ್ಟ ನಂತರ ವಂದೇ ಮಾತರಂ ಗೀತೆಯೊಂದಿಗೆ ವಿಧಾನಸಭೆ ಕಲಾಪ ಪುನಃ ಆರಂಭವಾಯಿತು. ಇದೇ ವೇಳೆ ಕಾರ್ಯದರ್ಶಿ ವರದಿ ಮಂಡನೆ ಮಾಡಲಾಯಿತು.
ಆ ಬಳಿಕ ಸಂತಾಪ ಸೂಚನೆ ನಿರ್ಣಯವನ್ನು ಮಂಡಿಸಿದ ಸ್ಪೀಕರ್ ಕಾಗೇರಿ, ಧರ್ಮೇಗೌಡ, ಮನಗೂಳಿ, ರೇಣುಕಾ ರಾಜೇಂದ್ರನ್, ಪ್ರೇಮಾನಂದ ಜೈವಂತ ಸುಬ್ರಾಯ, ಮಾಜಿ ಸಚಿವ ಬೂಟಾಸಿಂಗ್, ಉದ್ಯಮಿ ಆರ್.ಎನ್.ಶೆಟ್ಟಿ, ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ, ರಾಮಕೃಷ್ಣ ಆಶ್ರಮದ ಹರ್ಷಾನಂದ ಸ್ವಾಮಿ, ವಿಜ್ಞಾನಿ ಡಾ.ರೊದ್ದಂ ನರಸಿಂಹ ಸೇರಿದಂತೆ ಅಗಲಿದ ಗಣ್ಯರನ್ನು ಸದನಕ್ಕೆ ತಿಳಿಸಿದರು.
ಸಂತಾಪ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಎಲ್.ಎಲ್.ಧರ್ಮೇಗೌಡ ಅವರು 1958ರ ನವೆಂಬರ್ 16ರಂದು ಕಡೂರು ತಾಲೂಕಿನ ಸಖರಾಯಪಟ್ಟಣದ ಸರಪನಹಳ್ಳಿ ಗ್ರಾಮದಲ್ಲಿ ಜನಿಸಿದ್ದು ಬಿ.ಎ.ಪದವೀಧರರಾಗಿದ್ದರು. ಮಂಡಲ್ ಪಂಚಾಯತ್ ಪ್ರಧಾನರಾಗಿ ಮೇಲಕ್ಕೇರಿದ ಅವರು ಸಹಕಾರ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು ಎಂದು ಸ್ಮರಿಸಿದರು.
ಇದಕ್ಕೆ ಧ್ವನಿಗೂಡಿಸಿ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಎಸ್.ಎಲ್.ಧರ್ಮೇಗೌಡ ಅವರ ನಿಧನ ಅತ್ಯಂತ ಕೆಟ್ಟದಾಗಿ ನಡೆದಿದ್ದು, ಅತೀವ ನೋವುಂಟು ಮಾಡಿದೆ ನನಗೆ ಅತ್ಯಂತ ಆಪ್ತರಾಗಿದ್ದರು ಎಂದು ನೆನಪಿಸಿಕೊಂಡರು. ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಂ.ಸಿ.ಮನಗೂಳಿ 1998 ಹಾಗೂ 2018ರಲ್ಲಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಎರಡೂ ಬಾರಿಯೂ ಸಚಿವರಾಗಿ ಕೆಲಸ ಮಾಡಿದ್ದಾರೆ. ಅತ್ಯಂತ ಸರಳ, ಸಜ್ಜನ ರಾಜಕಾರಣಿಯಾಗಿದ್ದರು ಎಂದು ಸ್ಮರಿಸಿದರು.
ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ಇನ್ನಿತರ ಸದಸ್ಯರು ಅಗಲಿದ ಗಣ್ಯರನ್ನು ನೆನಪು ಮಾಡಿಕೊಂಡರು. ಬಳಿಕ ಮೃತರ ಗೌರವಾರ್ಥ ಎದ್ದು ನಿಂತು ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.







