ಶಾರ್ಕ್ ಸಂತತಿಯಲ್ಲಿ ಭಾರೀ ಕುಸಿತ: ಅಧ್ಯಯನ
ಟೋಕಿಯೊ (ಜಪಾನ್), ಜ. 28: ಕಳೆದ ಅರ್ಧ ಶತಮಾನದ ಅವಧಿಯಲ್ಲಿ, ಅತಿ ಮೀನುಗಾರಿಕೆಯಿಂದಾಗಿ ಕೆಲವು ಪ್ರಭೇದಗಳ ಶಾರ್ಕ್ ಮತ್ತು ರೇ ಮೀನುಗಳ ಸಂಖ್ಯೆಯಲ್ಲಿ 70 ಶೇಕಡದಷ್ಟು ಕುಸಿತವಾಗಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಇದು ಸಾಗರ ಜೀವಿಗಳ ಲೋಕದಲ್ಲಿ ಬೃಹತ್ ಕಂದಕವೊಂದನ್ನು ಸೃಷ್ಟಿಸಿದೆ ಹಾಗೂ ಈ ಕಂದಕ ವಿಸ್ತಾರಗೊಳ್ಳುತ್ತಿದೆ.
ಹ್ಯಾಮರ್‌ಹೆಡ್ ಶಾರ್ಕ್‌ಗಳಿಂದ ಹಿಡಿದು ಮಂತ್ರ ರೇವರೆಗಿನ ಪ್ರಭೇದಗಳಲ್ಲಿ ಭಾರೀ ಇಳಿಕೆಯಾಗಿರುವುದನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ.
ಅತಿ ಹೆಚ್ಚು ಸಂಕಷ್ಟಕ್ಕೆ ಒಳಗಾಗಿರುವ ಶಾರ್ಕ್ ಪ್ರಭೇದವೆಂದರೆ ‘ಓಶಾನಿಕ್ ವೈಟ್‌ಟಿಪ್’ ಶಾರ್ಕ್. ಇದು ಮುಖ್ಯವಾಗಿ ಮಾನವನಿಗೆ ಅಪಾಯಕಾರಿಯಾಗಿರುವ ಬಲಿಷ್ಠ ಶಾರ್ಕ್. ಆದರೆ, ಅದು ಇಂದು ಮಾನವ ಚಟುವಟಿಕೆಗಳಿಂದಾಗಿ ಅಳಿವಿನಂಚಿನಲ್ಲಿದೆ.
ಓಶಾನಿಕ್ ವೈಟ್‌ಟಿಪ್ ಶಾರ್ಕ್‌ಗಳನ್ನು ಅವುಗಳ ಈಜುರೆಕ್ಕೆಗಳಿಗಾಗಿ ಬೇಟೆಯಾಡಲಾಗುತ್ತಿದೆ. ಅವುಗಳ ಜಾಗತಿಕ ಸಂಖ್ಯೆ ಕಳೆದ 60 ವರ್ಷಗಳ ಅವಧಿಯಲ್ಲಿ 98 ಶೇಕಡದಷ್ಟು ಕುಸಿದಿದೆ ಎಂದು ಅಧ್ಯಯನದ ಹಿರಿಯ ಲೇಖಕ ಹಾಗೂ ಸೈಮನ್ ಫ್ರೇಸರ್ ವಿಶ್ವಿವಿದ್ಯಾನಿಲಯದ ಪ್ರೊಫೆಸರ್ ನಿಕ್ ಡಲ್ವಿ ಹೇಳುತ್ತಾರೆ.





