ಸುಪ್ರೀಂ ಕೋರ್ಟ್ ವಿರುದ್ಧ ಟ್ವೀಟ್: ʼಕ್ಷಮೆಯಾಚಿಸುವುದಿಲ್ಲʼ ಎಂದ ಕಾಮಿಡಿಯನ್ ಕುನಾಲ್ ಕಮ್ರಾ

ಹೊಸದಿಲ್ಲಿ,ಜ.29: ಸ್ಟ್ಯಾಂಡ್ ಅಪ್ ಕಾಮೆಡಿಯನ್ ಕುನಾಲ್ ಕಮ್ರಾ ಅವರು ಸುಪ್ರೀಂ ಕೋರ್ಟ್ ವಿರುದ್ಧ ಟ್ವೀಟ್ ಮಾಡಿದ್ದಕ್ಕಾಗಿ ಕ್ಷಮೆಯಾಚಿಸಲು ನಿರಾಕರಿಸಿದ್ದಾರೆ. ತನ್ನ ಟ್ವೀಟ್ ನಲ್ಲಿ ಸುಪ್ರೀಂ ಕೋರ್ಟ್ ಅನ್ನು ಅವಮಾನಕಾರಿಯಾಗಿ ಬಿಂಬಿಸಿದ್ದಾರೆ ಎಂದು ಅವರ ವಿರುದ್ಧ ನೋಟಿಸ್ ಹೊರಡಿಸಲಾಗಿತ್ತು. ಶುಕ್ರವಾರ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಅಫಿಡವಿಟ್‌ನಲ್ಲಿ, “ನ್ಯಾಯಾಂಗದಲ್ಲಿ ಸಾರ್ವಜನಿಕರ ನಂಬಿಕೆಯು ತನ್ನದೇ ಆದ ಕಾರ್ಯಗಳ ಮೇಲೆ ಸ್ಥಾಪಿತವಾಗಿದೆ, ಅದರ ಬಗೆಗಿನ ಟೀಕೆಗಳ ಕುರಿತಾಗಿ ಅಲ್ಲ” ಎಂದು ಕಮ್ರಾ ಹೇಳಿದ್ದಾರೆ.
"ನನ್ನ ಟ್ವೀಟ್‌ಗಳು ಮತ್ತು ಹಾಸ್ಯಗಳು ವಿಶ್ವದ ಅತ್ಯಂತ ಶಕ್ತಿಶಾಲಿ ನ್ಯಾಯಾಲಯದ ಅಡಿಪಾಯವನ್ನು ಅಲುಗಾಡಿಸಬಹುದು ಎಂದು ನೀವು ಸೂಚಿಸುತ್ತಿರುವುದು ನನ್ನ ಸಾಮರ್ಥ್ಯಗಳನ್ನು ಅತಿಯಾದ ಅಂದಾಜು ಮಾಡುತ್ತದೆ" ಎಂದು ಕಮ್ರಾ ಉನ್ನತ ನ್ಯಾಯಾಲಯಕ್ಕೆ ತಿಳಿಸಿದರು.
"ಪ್ರಜಾಪ್ರಭುತ್ವದಲ್ಲಿ ಅಧಿಕಾರವಿರುವ ಯಾವುದೇ ಸಂಸ್ಥೆಯು ಟೀಕೆಗೆ ಮೀರಿದೆ ಎಂದು ನಂಬುವುದು ಹೇಗಿದೆ ಅಂದರೆ, ವಲಸಿಗರು ಯೋಜನೆಯೇ ಇಲ್ಲದ ರಾಷ್ಟ್ರವ್ಯಾಪಿ ಲಾಕ್‌ಡೌನ್ ಸಮಯದಲ್ಲಿ ಮನೆಗೆ ಮರಳುವ ಅಗತ್ಯವಿದೆ ಎಂದು ಹೇಳುವಂತಿದೆ. ಇದು ಪ್ರಜಾಪ್ರಭುತ್ವ ವಿರೋಧಿಯಾಗಿದೆ” ಎಂದು ಅವರು ಹೇಳಿದರು.
ದೇಶದಲ್ಲಿ ಅಸಹಿಷ್ಣುತೆಯ ಸಂಸ್ಕೃತಿ ಬೆಳೆಯುತ್ತಿದೆ ಎಂದು ಹೇಳಿದ ಅವರು, ಮತ್ತೊಬ್ಬ ಹಾಸ್ಯನಟ ಮುನವ್ವರ್ ಫಾರೂಕಿ ಬಂಧನದ ಬಗ್ಗೆಯೂ ಮಾತನಾಡಿದರು.
"ಮುನವ್ವರ್ ಫಾರೂಕಿಯಂತಹ ಹಾಸ್ಯನಟರಿಗೆ ಅವರು ಮಾಡದ ಹಾಸ್ಯಕ್ಕಾಗಿ ಜೈಲು ಶಿಕ್ಷೆ ವಿಧಿಸಲಾಗುತ್ತಿದೆ ಮತ್ತು ಶಾಲಾ ವಿದ್ಯಾರ್ಥಿಗಳನ್ನು ದೇಶದ್ರೋಹಕ್ಕಾಗಿ ವಿಚಾರಣೆಗೊಳಪಡಿಸುವುದರೊಂದಿಗೆ ನಾವು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಆಕ್ರಮಣಕ್ಕೆ ಸಾಕ್ಷಿಯಾಗಿದ್ದೇವೆ. ಅಂತಹ ಸಮಯದಲ್ಲಿ ಈ ನ್ಯಾಯಾಲಯವು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾರ್ಡಿನಲ್ ತತ್ವವೆಂದು ತೋರಿಸುತ್ತದೆ ಎಂದು ನಾನು ಭಾವಿಸುತ್ತೇನೆ ”ಎಂದು ಅಫಿಡವಿಟ್ ನಲ್ಲಿ ತಿಳಿಸಲಾಗಿದೆ.







