ಗಣತಂತ್ರ ದಿನದಂದು ಹಿಂಸಾಚಾರ ದುರದೃಷ್ಟಕರ:ರಾಷ್ಟ್ರಪತಿ ಕೋವಿಂದ್
ಸಂಸತ್ತಿನ ಮುಂಗಡಪತ್ರ ಅಧಿವೇಶನ

ಹೊಸದಿಲ್ಲಿ,ಜ.29: ಸಂಸತ್ತಿನ ಮುಂಗಡಪತ್ರ ಅಧಿವೇಶನ ಶುಕ್ರವಾರದಿಂದ ಆರಂಭಗೊಂಡಿದೆ. ಮೊದಲ ದಿನ ಉಭಯ ಸದನಗಳ ಜಂಟಿ ಬೈಠಕ್ ಅನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು,ಗಣತಂತ್ರ ದಿನದಂದು ಹಿಂಸಾಚಾರ ನಡೆದಿದ್ದು ದುರದೃಷ್ಟಕರ ಎಂದು ವಿಷಾದಿಸಿದರು.
ಕೊರೋನವೈರಸ್ ಸಂಕಷ್ಟದ ಸಮಯದಲ್ಲಿ ಮುಂಗಡಪತ್ರ ಅಧಿವೇಶನವನ್ನು ನಡೆಸಲಾಗುತ್ತಿದೆ ಎನ್ನುವುದನ್ನು ಪ್ರಮುಖವಾಗಿ ಬಿಂಬಿಸಿದ ರಾಷ್ಟ್ರಪತಿಗಳು,‘ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ನಾವು ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮತ್ತು ಆರು ಸಂಸದರು ಸೇರಿದಂತೆ ಹಲವಾರು ಪ್ರಜೆಗಳನ್ನು ಕಳೆದುಕೊಂಡಿದ್ದೇವೆ ’ ಎಂದರು.
ಸರಕಾರದ ಸಕಾಲಿಕ ನಿರ್ಧಾರಗಳಿಂದಾಗಿ ಕೋಟ್ಯಂತರ ಜನರ ಜೀವಗಳು ಉಳಿದಿವೆ, ಕೊರೋನವೈರಸ್ ರೋಗಿಗಳ ಸಂಖ್ಯೆಯು ಕಡಿಮೆಯಾಗುತ್ತಿದೆ. ಇದು ತನಗೆ ತೃಪ್ತಿಯನ್ನು ತಂದಿದೆ ಎಂದು ಅವರು ನುಡಿದರು.
ಬಹುಚರ್ಚಿತ ಕೃಷಿ ಕಾನೂನುಗಳ ಕುರಿತು ಮಾತನಾಡಿದ ಅವರು,ವ್ಯಾಪಕ ಚರ್ಚೆಗಳ ಬಳಿಕ ಏಳು ತಿಂಗಳುಗಳ ಹಿಂದೆ ಮೂರು ಮಹತ್ವದ ಕೃಷಿ ಕಾನೂನುಗಳನ್ನು ಸಂಸತ್ತು ಅಂಗೀಕರಿಸಿದೆ. ಹೀಗಿದ್ದರೂ ಹಿಂಸಾಚಾರದ ಮೂಲಕ ರಾಷ್ಟ್ರಧ್ವಜ ಮತ್ತು ಗಣತಂತ್ರ ದಿನಕ್ಕೆ ಅವಮಾನವನ್ನು ಮಾಡಿದ್ದು ಅತ್ಯಂತ ದುರದೃಷ್ಟಕರವಾಗಿದೆ ಎಂದರು.
ಕೃಷಿ ಕಾನೂನುಗಳ ಜಾರಿಯನ್ನು ತಡೆಹಿಡಿಯುವಂತೆ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನೂ ಉಲ್ಲೇಖಿಸಿದ ರಾಷ್ಟ್ರಪತಿಗಳು,ಸುಪ್ರೀಂ ಕೋರ್ಟ್ ಯಾವುದೇ ನಿರ್ಧಾರವನ್ನು ಕೈಗೊಂಡರೂ ಅದನ್ನು ಸರಕಾರವು ಗೌರವಿಸುತ್ತದೆ ಎಂದು ಹೇಳಿದರು.
ನೂತನ ಕೃಷಿ ಕಾನೂನುಗಳಿಂದ 10 ಕೋಟಿಗೂ ಅಧಿಕ ಸಣ್ಣರೈತರಿಗೆ ಲಾಭವಾಗಲಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಕೃಷಿ ಕಾನೂನುಗಳ ವಿರುದ್ಧ ದಿಲ್ಲಿಯ ಗಡಿಗಳಲ್ಲಿ ಪ್ರತಿಭಟನೆಯನ್ನು ನಡೆಸುತ್ತಿರುವ ರೈತರನ್ನು ಬೆಂಬಲಿಸಿ ರಾಷ್ಟ್ರಪತಿಗಳ ಭಾಷಣವನ್ನು ಬಹಿಷ್ಕರಿಸಲು 18 ಪ್ರತಿಪಕ್ಷಗಳ ನಾಯಕರು ನಿರ್ಧರಿಸಿದ್ದರು.
ಅಧಿವೇಶನ ಆರಂಭಕ್ಕೆ ಮುನ್ನ ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ಸಂಸತ್ತಿನಲ್ಲಿ ಚರ್ಚೆಗಳಿಗೆ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು,‘ಮುಂಬರುವ ದಶಕವು ಭಾರತದ ಅಭಿವೃದ್ಧಿಯ ದೃಷ್ಟಿಯಿಂದ ಮಹತ್ವಪೂರ್ಣವಾಗಲಿದೆ. ನಾವು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಮಹಾನ್ ನಾಯಕರ ಮುನ್ನೋಟ ಮತ್ತು ಕನಸುಗಳನ್ನು ನೆನಪಿಸಿಕೊಳ್ಳಬೇಕು. ಸಂಸತ್ತಿನಲ್ಲಿ ವಿವರವಾದ ಚರ್ಚೆಗಳು ನಡೆಯಲಿ ’ ಎಂದು ಹೇಳಿದ್ದಾರೆ.
ಸಂಸತ್ತಿನ ಬಜೆಟ್ ಅಧಿವೇಶನವು ಕೋಲಾಹಲಪೂರ್ಣವಾಗಿರುವ ನಿರೀಕ್ಷೆಯಿದ್ದು,ಈ ಹಿನ್ನೆಲೆಯಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಶುಕ್ರವಾರ ಸರ್ವಪಕ್ಷಗಳ ಸಭೆಯನ್ನು ಕರೆದಿದ್ದರು.
ಕೋವಿಡ್ ಆರ್ಥಿಕತೆ,ಚೀನಾದೊಂದಿಗಿನ ಗಡಿ ಬಿಕ್ಕಟ್ಟು ಹಾಗೂ ರಿಪಬ್ಲಿಕ್ ಟಿವಿಯ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಮತ್ತು ಬ್ರಾಡ್‌ಕಾಸ್ಟ್ ಆಡಿಯನ್ಸ್ ರೀಸರ್ಚ್ ಕೌನ್ಸಿಲ್‌ನ ಮಾಜಿ ಮುಖ್ಯಸ್ಥ ಪಾರ್ಥೊ ದಾಸಗುಪ್ತಾ ನಡುವಿನ ವಾಟ್ಸ್‌ಆ್ಯಪ್ ಚಾಟ್‌ಗಳು ಸೇರಿದಂತೆ ವಿವಿಧ ವಿಷಯಗಳಲ್ಲಿ ಸರಕಾರವನ್ನು ಗುರಿಯಾಗಿಟ್ಟುಕೊಂಡು ಪ್ರತಿಪಕ್ಷಗಳು ದಾಳಿ ನಡೆಸುವ ಸಾಧ್ಯತೆಗಳಿವೆ.
ಸಂಸತ್ತಿನ ಮುಂಗಡಪತ್ರ ಅಧಿವೇಶನವು ಜ.29ರಿಂದ ಫೆ.15ರವರೆಗೆ ಮತ್ತು ಮಾ.8ರಿಂದ ಎಪ್ರಿಲ್ 8ರವರೆಗೆ ಹೀಗೆ ಎರಡು ಭಾಗಗಳಲ್ಲಿ ನಡೆಯಲಿದ್ದು,ಒಟ್ಟು 33 ಬೈಠಕ್‌ಗಳಿರಲಿವೆ.







