ನಾಳೆಯಿಂದ ರೈತರ ಪರ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿರುವ ಅಣ್ಣಾ ಹಝಾರೆ
"ಮೂರು ತಿಂಗಳಲ್ಲಿ ಐದು ಬಾರಿ ಕೇಂದ್ರಕ್ಕೆ ಪತ್ರ ಬರೆದಿದ್ದೇನೆ"

ಪುಣೆ,ಜ.29: ಕೇಂದ್ರ ಸರಕಾರ ಜಾರಿಗೆ ತಂದಿರುವ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ರೈತರು ನಡೆಸುತ್ತಿರುವ ಪ್ರತಿಭಟನೆಗೆ ಹಿರಿಯ ಹೋರಾಟಗಾರ ಅಣ್ಣಾ ಹಝಾರೆ ಬೆಂಬಲ ಸೂಚಿಸಿದ್ದಾರೆ. ಕೇಂದ್ರ ಸರಕಾರದೊಂದಿಗಿನ ಮಾತುಕತೆಯು ಫಲಪ್ರದವಾಗದ ಕಾರಣ ನಾಳೆಯಿಂದ ತಮ್ಮ ಹುಟ್ಟೂರಿನಲ್ಲಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದಾರೆಂದು timesofindia.com ವರದಿ ಮಾಡಿದೆ.
ಬಿಜೆಪಿಯ ಹಿರಿಯ ಮುಖಂಡ ಗಿರೀಶ್ ಮಹಾಜನ್ ರಲೇಗಾನ್ ಸಿದ್ದಿಯಲ್ಲಿರುವ ಹಝಾರೆ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಹಝಾರೆ ಉಪವಾಸ ಸತ್ಯಾಗ್ರಹ ಕೈಗೊಳ್ಳದಂತೆ ಅವರಲ್ಲಿ ಮನವಿ ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ರಾಜ್ಯ ಸಚಿವ ಕೈಲಾಶ್ ಚೌಧರಿ ಹಾಗೂ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಶುಕ್ರವಾರ ಅಣ್ಣಾ ಹಝಾರೆಯನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
"ನಾನು ನನ್ನ ಹುಟ್ಟೂರು ರಲೇಗಾನ್ ಸಿದ್ದಿಯಲ್ಲಿರುವ ಯಾದವ್ ಬಾಬಾ ದೇವಸ್ಥಾನದಲ್ಲಿ ನಾಳೆಯಿಂದ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದೇನೆ. ಕೋವಿಡ್ ಕಾರಣದಿಂದಾಗಿ ನನ್ನ ಬೆಂಬಲಿಗರು ಊರಿಗೆ ಬಾರದೇ, ನೀವಿರುವಲ್ಲಿಂದಲೇ ಬೆಂಬಲ ವ್ಯಕ್ತಪಡಿಸಿ ಎಂದು ಅಣ್ಣಾ ಹಜಾರೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
"ಕೇಂದ್ರ ಕೃಷಿ ಸಚಿವರಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ನಾನು ಕಳೆದ ಮೂರು ತಿಂಗಳಿನಲ್ಲಿ 5 ಬಾರಿ ಕೃಷಿ ಕಾಯ್ದೆಯ ಕುರಿತಾದಂತೆ ಪತ್ರ ಬರೆದಿದ್ದೇನೆ. ಕೇಂದ್ರದ ಪರವಾಗಿ ಕೆಲವರು ಬಂದು ಮಾತುಕತೆ ನಡೆಸಿದ್ದರೂ ಕೂಡಾ ಯಾವುದೇ ಸಕಾರಾತ್ಮಕ ಫಲಿತಾಂಶ ಬಂದಿಲ್ಲ ಎಂದು ಹಝಾರೆ ಹೇಳಿಕೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ.







