ಮಣಿಪಾಲದಲ್ಲಿ ‘ಸಲಾಂ ಕಲಾಂ’ ಕೃತಿ ಬಿಡುಗಡೆ

ಉಡುಪಿ, ಜ.29: ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ, ಡಾ.ಪಳ್ಳತ್ತಡ್ಕ ಕೇಶವ ಭಟ್ ಸ್ಮಾರಕ ಟ್ರಸ್ಟ್ ಮಣಿಪಾಲ ಇವರ ಜಂಟಿ ಆಶ್ರಯದಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಗುರುವಾರ ಸಂಜೆ ಮಣಿಪಾಲದ ನಿರ್ಮಿತಿ ಕೇಂದ್ರದಲ್ಲಿ ನಡೆದ ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಕಲಾಂ ಅವರ ನೆನಪಿನ ‘ಸಲಾಂ ಕಲಾಂ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಡಾ.ಅಬ್ದುಲ್ ಕಲಾಂ ಅವರ ಶಿಷ್ಟಾಚಾರ ಹಾಗೂ ಸಮನ್ವಯ ಅಧಿಕಾರಿಯಾಗಿದ್ದ ಜಯಪ್ರಕಾಶ್ ರಾವ್ ಕೆ.ಅವರ ‘ಹಮಾರಾ ಪಿಆರ್‌ಓ’ ಕೃತಿಯನ್ನು ಸುಹಾಸಂ ಉಡುಪಿ ಅಧ್ಯಕ್ಷ ಶಾಂತರಾಜ ಐತಾಳ್ ಬಿಡುಗಡೆಗೊಳಿಸಿದರು.
ಹಿರಿಯ ಪತ್ರಕರ್ತರಾದ ನಿತ್ಯಾನಂದ ಪಡ್ರೆ ಅವರು ಕೃತಿಯನ್ನು ಪರಿಚಯಿಸಿ ಮಾತನಾಡಿ, ಸುಮಾರು 40 ಲೇಖನಗಳ ಈ ಕೃತಿಯಲ್ಲಿ ವ್ಯಕ್ತಿಯೊಬ್ಬನ ನಾಲ್ಕು ಮುಖಗಳು ಕಾಣಲು ಸಿಗುತ್ತದೆ. ವೈಯಕ್ತಿಕ ಮುಖ, ಔದ್ಯೋಗಿಕ ಮುಖ, ಸಾಮಾಜಿಕ ಹಾಗೂ ಕೌಟುಂಬಿಕ ಮುಖ....ಈ ಪುಸ್ತಕದಲ್ಲಿ ಕಾಣಸಿಗುತ್ತದೆ. ಡಾ. ಅಬ್ದುಲ್ ಕಲಾಂ ಅವರ ಜೊತೆಗಿನ ಲೇಖಕರ ಬಾಂಧವ್ಯ ಬಹಳ ವಿಶಿಷ್ಟವಾದದ್ದು ಎಂದರು.
ಕಾರ್ಯಕ್ರಮದಲ್ಲಿ ಲೇಖಕ ಜಯಪ್ರಕಾಶ್ ರಾವ್ ಕೆ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಕಲಾವಿದೆ ಪವನಾ ಆಚಾರ್, ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಶಂಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಗೌರವಾಧ್ಯಕ್ಷ ಯು ವಿಶ್ವನಾಥ್ ಶೆಣೈ ವಹಿಸಿದ್ದರು.
ಉಪಾಧ್ಯಕ್ಷ ನಾಗರಾಜ್ ಹೆಬ್ಬಾರ್ ಸ್ವಾಗತಿಸಿದರು. ಕಲಾವಿದ ರಾಜೇಶ್ ಭಟ್ ಪಣಿಯಾಡಿ ನಿರೂಪಿಸಿ, ಪ್ರಧಾನ ಕಾರ್ಯದರ್ಶಿ ಗಿರೀಶ್ ತಂತ್ರಿ ವಂದಿಸಿದರು. ಬಳಿಕ ಮಣಿಪಾಲದ ಪವನಾ ಬಿ. ಆಚಾರ್ ಇವರಿಂದ ವೀಣಾ ವಾದನ ‘ವೀಣೆ ಬೆಳಗು ಬೆಡಗು’ ನಡೆಯಿತು.







