ಶೀಘ್ರದಲ್ಲೇ ಕರಾವಳಿಗೆ ಪ್ರತ್ಯೇಕ ಮರಳು ನೀತಿ: ಸಚಿವ ಮುರುಗೇಶ್ ನಿರಾಣಿ

ಬೆಂಗಳೂರು, ಜ. 29: ಕರಾವಳಿ ಭಾಗಗಳಲ್ಲಿ ಮರಳು ಗಣಿಗಾರಿಕೆ ಚಟುವಟಿಕೆಗೆ ಅನುಕೂಲವಾಗುವಂತೆ ಅತಿ ಶೀಘ್ರದಲ್ಲೇ ‘ಕರಾವಳಿ ಪ್ರದೇಶಕ್ಕೆ ಪ್ರತ್ಯೇಕ ಮರಳು ನೀತಿ'ಯನ್ನು ಸರಕಾರ ಪ್ರಕಟಿಸಲಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಇಂದಿಲ್ಲಿ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಯು.ಟಿ.ಖಾದರ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಕರಾವಳಿ ಭಾಗದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಅನ್ವಯ ಆಗುವಂತೆ ಕರಾವಳಿ ಪ್ರತ್ಯೇಕ ಮರಳು ನೀತಿ ಪ್ರಕಟಿಸಲಿದ್ದೇವೆ. ಇದರಿಂದಾಗಿ ಈ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಕರಾವಳಿಗೆ ಪ್ರತ್ಯೇಕ ಮರಳು ನೀತಿ ಜಾರಿ ಮಾಡಬೇಕೆಂಬುದು ಬಹುದಿನಗಳ ಬೇಡಿಕೆಯಾಗಿದೆ. ಸಚಿವನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅಧಿಕಾರಿಗಳ ಸಭೆಯನ್ನು ನಡೆಸಿದ್ದೇನೆ. ಮರಳಿನ ಕೊರತೆ ಬಗ್ಗೆ ಜನರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಅರಿವಿದೆ. ಹೀಗಾಗಿ ಅನಗತ್ಯ ವಿಳಂಬ ಮಾಡದೆ ಶೀಘ್ರದಲ್ಲೆ ಎಲ್ಲ ವರ್ಗದ ಜನರಿಗೆ ಸುಲಭವಾಗಿ ಮರಳು ದೊರೆಯುವಂತೆ ಸರಕಾರ ಕ್ರಮ ವಹಿಸಲಿದೆ ಎಂದು ಹೇಳಿದರು.
ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಸದಸ್ಯ ಯು.ಟಿ.ಖಾದರ್, ಸಚಿವರು ಜಿಲ್ಲೆಯಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿ ಪ್ರತ್ಯೇಕ ಮರಳು ನೀತಿ ಅಗತ್ಯವಿದೆ ಎಂದು ಹೇಳಿ ಪ್ರಚಾರ ಗಿಟ್ಟಿಸಿಕೊಂಡರೆ ಹೊರತು ಜನರಿಗೆ ಯಾವುದೇ ಅನುಕೂಲ ಆಗಲಿಲ್ಲ. ಹೀಗಾಗಿ ತ್ವರಿತವಾಗಿ ಕರಾವಳಿಗೆ ಪ್ರತ್ಯೇಕ ಮರಳು ನೀತಿ ರೂಪಿಸಿ ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಧ್ವನಿಗೂಡಿಸಿದ ಆಡಳಿತ ಪಕ್ಷದ ಸದಸ್ಯರಾದ ರಘುಪತಿ ಭಟ್, ಕುಮಾರ್ ಬಂಗಾರಪ್ಪ, ಜೆಡಿಎಸ್‍ನ ನಾಡಗೌಡ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರಿಗೆ ಸುಲಭವಾಗಿ ಮರಳು ಲಭ್ಯವಾಗುತ್ತಿಲ್ಲ. ಪ್ರತಿ ಕೆಡಿಪಿ ಸಭೆಯಲ್ಲೂ ಇದು ಪ್ರಸ್ತಾಪವಾಗುತ್ತದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರಳೀಕರಣ: ನಮ್ಮ ಸರಕಾರ ಎಲ್ಲರಿಗೂ ಸುಲಭವಾಗಿ ಮರಳು ದೊರೆಯುವಂತೆ ವ್ಯವಸ್ಥೆ ಮಾಡಲಿದೆ. ಕಾನೂನಿನ ವ್ಯಾಪ್ತಿಯಲ್ಲೇ ನಿಯಮಗಳಡಿಯಲ್ಲಿ ಮರಳು ಹರಾಜು ಪ್ರಕ್ರಿಯೆ ನಡೆಯಲಿದೆ. ಮರಳು ಎಲ್ಲರಿಗೂ ಸಿಕ್ಕರೆ ಮಾತ್ರ ಸುಲಭವಾಗಿ ಕಾಮಗಾರಿಗಳು ನಡೆಯುತ್ತವೆ ಎಂದು ಸಚಿವ ಮುರುಗೇಶ್ ನಿರಾಣಿ ತಿಳಿದರು.
ದಕ್ಷಿಣ ಕನ್ನಡ ಜಿಲ್ಲೆಯ ಸಿಆರ್ ಝೆಡ್ ವ್ಯಾಪ್ತಿಯಲ್ಲಿನ ನದಿಪಾತ್ರಗಳಲ್ಲಿ 2020-21ನೇ ಸಾಲಿನಲ್ಲಿ ಒಟ್ಟು 13 ಮರಳು ದಿಬ್ಬಗಳನ್ನು ತೆರವುಗೊಳಿಸಲು ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ. 13 ಮರಳು ದಿಬ್ಬಗಳಲ್ಲಿ ಮರಳನ್ನು ತೆರವುಗೊಳಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿತವಾಗಿರುವ 7 ಸದಸ್ಯರ ಸಮಿತಿಯಿಂದ ಒಟ್ಟು 104 ಸಾಂಪ್ರದಾಯಿಕ ಮರಳು ತೆಗೆಯುವ ವ್ಯಕ್ತಿಗಳಿಗೆ ಒಂದು ವರ್ಷದ ಅವಧಿಗೆ ತಾತ್ಕಾಲಿಕ ಪರವಾನಗಿಗಳನ್ನು ನೀಡಲಾಗಿದೆ ಎಂದು ಹೇಳಿದರು.
ಕೇಂದ್ರ ಸರಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಯ ಸೂಚನೆಯಂತೆ ಕರಾವಳಿ ನಿಯಂತ್ರಣ ವಲಯ ನದಿಪಾತ್ರಗಳಲ್ಲಿ ಮರಳು ದಿಬ್ಬಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಸಿಆರ್ ಝೆಡ್ ನದಿಪಾತ್ರಗಳ ವ್ಯಾಪ್ತಿಯಲ್ಲಿ 2011-12 ಹಾಗೂ ಅದಕ್ಕಿಂತ ಮೊದಲು 1 ವರ್ಷ, 3 ವರ್ಷಗಳ ಮರಳು ದಿಬ್ಬಗಳನ್ನು ತೆರವುಗೊಳಿಸಲು ಗಡಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ತಾತ್ಕಾಲಿಕ ಪರವಾನಗಿ ಹೊಂದಿರುವವರನ್ನು ಮಾತ್ರ ಪರಿಗಣಿಸಲಾಗುತ್ತದೆ ಎಂದರು.







