ಕಾಂಗ್ರೆಸ್ ಗೈರು: ವಿಧಾನಸಭೆಯ ಕಲಾಪ ಸಲಹಾ ಸಮಿತಿ ಸಭೆ ಮುಂದೂಡಿಕೆ

ಬೆಂಗಳೂರು, ಜ.29: ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಪಕ್ಷದ ಮುಖಂಡರ ಗೈರು ಹಾಜರಿಯಿಂದಾಗಿ, ಶುಕ್ರವಾರ ವಿಧಾನಸಭೆಯ ಕಲಾಪ ಸಲಹಾ ಸಮಿತಿ ಸಭೆಯನ್ನು ಮುಂದೂಡಿದ ಪ್ರಸಂಗ ಜರುಗಿದೆ.
ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆಯಲ್ಲಿ ಇಂದು ಬೆಳಗ್ಗೆ 10 ಗಂಟೆಗೆ ಕಲಾಪ ಸಲಹಾ ಸಮಿತಿ ಸಭೆಯನ್ನು ಕರೆಯಲಾಗಿತ್ತು. ಆದರೆ, ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್ ನಿನ್ನೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಕಲಾಪ ಸಲಹಾ ಸಮಿತಿ ಸಭೆಯನ್ನು ಬಹಿಷ್ಕರಿಸಲು ನಿರ್ಣಯ ಕೈಗೊಂಡಿದ್ದರಿಂದ, ಇಂದು ಕಾಂಗ್ರೆಸ್ ಪಕ್ಷದ ಯಾವೊಬ್ಬ ಮುಖಂಡರು ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಲಿಲ್ಲ.
ಕಲಾಪ ಸಲಹಾ ಸಮಿತಿಯಲ್ಲಿ ಕೈಗೊಳ್ಳುವ ತೀರ್ಮಾನದಂತೆ ರಾಜ್ಯ ಸರಕಾರವು ಸದನದಲ್ಲಿ ನಡೆದುಕೊಳ್ಳುವುದಿಲ್ಲ. ಸಭೆಯಲ್ಲಿ ಕೈಗೊಳ್ಳುವ ನಿರ್ಧಾರಗಳಿಗೆ ವ್ಯತಿರಿಕ್ತವಾಗಿ ಸರಕಾರ ಸದನದಲ್ಲಿ ವರ್ತಿಸುತ್ತದೆ. ಆದುದರಿಂದ, ನಾವು ಸದನ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದೇವೆ ಎಂದು ನಿನ್ನೆ ಸ್ಪೀಕರ್ ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದರು.
ಕಲಾಪ ಸಲಹಾ ಸಮಿತಿ ಸಭೆ ಮುಂದೂಡಿರುವ ಕುರಿತು ಮಾಹಿತಿ ನೀಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಪ್ರಜಾಪ್ರಭುತ್ವದ ಅಡಿಯಲ್ಲಿ ನಾನು ಸದನವನ್ನು ನಡೆಸುತ್ತಿದ್ದೇನೆ. ಪ್ರತಿಪಕ್ಷಗಳು ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲಿಲ್ಲ ಎಂಬ ಕಾರಣಕ್ಕೆ ಇಂದಿನ ಸಭೆಯನ್ನು ಮುಂದೂಡಿದ್ದೇವೆ ಎಂದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ನಾನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಜೊತೆ ಚರ್ಚೆ ಮಾಡುತ್ತೇನೆ. ಸದನದ ಒಳಗಡೆ ಹಾಗೂ ಸಭೆಯಲ್ಲಿ ಭಿನ್ನಾಭಿಪ್ರಾಯ ಸಹಜ. ಕಾಂಗ್ರೆಸ್ ಪಕ್ಷವು ದೀರ್ಘ ಕಾಲ ದೇಶವನ್ನು ಆಳಿದೆ. ಕಾಯ್ದೆಗಳನ್ನು ಹಿಂಪಡೆಯಲು ಒತ್ತಾಯಿಸಿ ಹೋರಾಟ ಮಾಡಲು ಬೇರೆ ಬೇರೆ ಮಾರ್ಗಗಳಿವೆ. ಆದುದರಿಂದ, ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳುವಂತೆ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುತ್ತೇನೆ ಎಂದು ಸ್ಪೀಕರ್ ತಿಳಿಸಿದರು.
ಕಾಂಗ್ರೆಸ್ ನಾಯಕರು ನಿನ್ನೆ ಕಲಾಪ ಸಲಹಾ ಸಮಿತಿ ಸಭೆಗೆ ಬರುವುದಿಲ್ಲ ಎಂದು ಹೇಳಿದ್ದರು. ಈ ಸಂಬಂಧ ಸಿದ್ದರಾಮಯ್ಯ, ಆರ್.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್ ಜೊತೆ ಮಾತನಾಡಿದ್ದೇನೆ. ಈ ಹಿಂದೆ ನಡೆಸಿದ್ದ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಕೈಗೊಂಡ ತೀರ್ಮಾನಗಳಿಗೆ ಸಂಬಂಧಿಸಿದಂತೆ ಅವರು ಕೆಲವೊಂದು ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ್ದಾರೆ. ಸ್ಪೀಕರ್ ನೇತೃತ್ವದಲ್ಲಿ ಚರ್ಚೆ ಮಾಡಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳೋಣ ಬನ್ನಿ ಎಂದು ಮನವಿ ಮಾಡಿದ್ದೆ. ಆದರೂ, ಅವರು ಇಂದಿನ ಸಭೆಗೆ ಬರಲಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.







