ಯುಪಿಸಿಎಲ್; ತಿಂಗಳೊಳಗೆ ಭೂಸಂತ್ರಸ್ಥರ ಸಮಸ್ಯೆ ಪರಿಹಾರ ಯತ್ನ: ಕಿಶೋರ್ ಆಳ್ವ ಭರವಸೆ
ಪ್ರತಿಭಟನೆ ಕೈಬಿಟ್ಟ ಭೂಸಂತ್ರಸ್ಥರು

ಪಡುಬಿದ್ರೆ, ಜ.29: ಎಲ್ಲೂರಿನಲ್ಲಿ ಕಾರ್ಯಾಚರಿಸುತ್ತಿರುವ ಯುಪಿಸಿಎಲ್ ಅದಾನಿ ಉಷ್ಣವಿದ್ಯುತ್ ಸ್ಥಾವರ ಘಟಕದ ವಿಸ್ತರಣೆ ಸಲುವಾಗಿ ಭೂಸ್ವಾಧೀನ ಮಾಡುವಾಗ ಮನೆಮಠ ಕಳೆದುಕೊಂಡ ಭೂಸಂತ್ರಸ್ಥ ಕುಟುಂಬಗಳ ಬೇಡಿಕೆಗಳನ್ನು ಒಂದು ತಿಂಗಳೊಳಗೆ ಬಗೆಹರಿಸಲು ಪ್ರಯತ್ನಿಸುವುದಾಗಿ ಅದಾನಿ ಯುಪಿಸಿಎಲ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಸಂತ್ರಸ್ಥರು ಇಂದಿನ ತಮ್ಮ ಯೋಜಿತ ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.
ಎಲ್ಲೂರಿನಲ್ಲಿ ಯುಪಿಸಿಎಲ್‌ನ ಎರಡನೇ ಹಂತದ ವಿಸ್ತರಣೆಗಾಗಿ 34 ಕುಟುಂಬಗಳನ್ನು ಒಕ್ಕಲೆಬ್ಬಿಸಿ 139 ಎಕರೆ ಫಲವತ್ತಾದ ಕೃಷಿಭೂಮಿಯನ್ನು ಕೆಐಎಡಿಬಿ ಮೂಲಕ ಭೂಸ್ವಾದೀನಪಡಿಸಿಕೊಳ್ಳಲಾಗಿತ್ತು. ಈ ವೇಳೆ ಭೂಮಿ ಕಳೆದುಕೊಳ್ಳುವ ಪ್ರತಿ ಕುಟುಂಬದ ತಲಾ ಒಬ್ಬ ಒಬ್ಬ ಸದಸ್ಯನಿಗೆ ಕಂಪೆನಿಯಲ್ಲಿ ಖಾಯಂ ಉದ್ಯೋಗ ಅಥವಾ ಉದ್ಯೋಗ ಬೇಡವಾದಲ್ಲಿ ಉದ್ಯೋಗ ಪರಿಹಾರಧನ ನೀಡುವುದಾಗಿ ಉಡುಪಿ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ನೀಡಿದ ವಾಗ್ದಾನವನ್ನು ಯುಪಿಸಿಎಲ್ ಕಂಪೆನಿ ಪಾಲಿಸಿಲ್ಲ ಎಂದು ಎಲ್ಲೂರು ಆಸುಪಾಸಿನ ಸಂತ್ರಸ್ಥ ಕುಟುಂಬಗಳು ಆರೋಪಿಸಿದ್ದವು.
ಜಿಲ್ಲಾಧಿಕಾರಿಗಳ ನೇತೃತ್ವದ ಸಭೆ ನಡೆದು ಈಗಾಗಲೇ ಐದು ವರ್ಷ ಕಳೆದಿದ್ದು, ಭೂಸಂತ್ರಸ್ಥರನ್ನು ಒಕ್ಕಲೆಬ್ಬಿಸಿ ನಾಲ್ಕು ವರ್ಷ ಕಳೆದಿದೆ. 2015ರ ಡಿ.16ರಂದು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಬೆಯಲ್ಲಿ ಕಂಪೆನಿ ನೀಡಿದ ಭರವಸೆಯಂತೆ ಮನೆಮಠ, ಜಮೀನು ಕಳೆದುಕೊಂಡ ಭೂಸಂತ್ರಸ್ತರ ಕುಟುಂಬದ ಒಬ್ಬ ಸದಸ್ಯನಿಗೆ ಇನ್ನೂ ಖಾಯಂ ಉದ್ಯೋಗ ಅಥವಾ ಉದ್ಯೋಗ ಪರಿಹಾರಧನ ವನ್ನು ನೀಡಿಲ್ಲ ಎಂದು ದೂರಿದ ಸಂತ್ರಸ್ಥರು, ಒಂದು ವಾರದೊಳಗೆ ಬೇಡಿಕೆ ಈಡೇರಿಸದಿದ್ದರೆ ಇದರ ವಿರುದ್ಧ ಜ.29ರಂದು ಕಂಪೆನಿಯ ಮುಖ್ಯಧ್ವಾರದ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದರು.
ಈ ಹಿನ್ನೆಲೆಯಲ್ಲಿ ಅದಾನಿ ಯುಪಿಸಿಎಲ್‌ನ ಜಂಟಿ ನಿರ್ದೇಶಕ ಕಿಶೋರ್ ಆಳ್ವ ಅವರು ಇತರ ಅಧಿಕಾರಿಗಳೊಂದಿಗೆ ಭೂಸಂತ್ರಸ್ಥರ ಕಾಲೋನಿಗೆ ತೆರಳಿ ಮಾತುಕತೆ ನಡೆಸಿದ್ದು, ಒಂದು ತಿಂಗಳೊಳಗಾಗಿ ಸಂತ್ರಸ್ಥರ ಸಮಸ್ಯೆ ಬಗೆಹರಿಸಿ ನ್ಯಾಯ ದೊರಕಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.
ಅಲ್ಲದೇ ಒಂದು ತಿಂಗಳ ಸಮಯದಲ್ಲಿ ಆಗುವ ಬೆಳವಣಿಗೆಯ ಕುರಿತಂತೆ ತಿಳಿಸಲು ಫೆ.7ರಂದು ಭೂಸಂತ್ರಸ್ಥರ ಜೊತೆ ಮತ್ತೊಮ್ಮೆ ಸಭೆ ನಡೆಸುವ ಆಶ್ವಾಸನೆ ಯನ್ನೂ ಕಿಶೋರ್ ಆಳ್ವ ನೀಡಿದ್ದು, ಅದರಂತೆ ಸಂತ್ರಸ್ಥರ ತಮ್ಮ ಪ್ರತಿಭಟನೆಯ ನಿರ್ಧಾರವನ್ನು ಕೈಬಿಟ್ಟಿದ್ದಾರೆ ಎಂದು ಸಂತ್ರಸ್ಥರು ತಿಳಿಸಿದ್ದಾರೆ.








