ದುಬೈ: ಕೋಮಾದಲ್ಲಿದ್ದ ದಿಲೀಪ್ ನಿಧನ; ಅನಿವಾಸಿ ಕನ್ನಡಿಗರಿಂದ ಮೃತದೇಹ ಸ್ವದೇಶಕ್ಕೆ ರವಾನೆ

ಮಂಗಳೂರು, ಜ.29: ದುಬೈನಲ್ಲಿ ಕಳೆದ ಎಂಟು ತಿಂಗಳುಗಳಿಂದ ಕೋಮಾದಲ್ಲಿದ್ದು, ಕಳೆದ ವಾರ ನಿಧನರಾದ ಮಂಗಳೂರು ಮೂಲದ ವ್ಯಕ್ತಿಯ ಮೃತದೇಹವನ್ನು ತಾಯ್ನಿಡಿಗೆ ಕಳುಹಿಸುವಲ್ಲಿ ಅನಿವಾಸಿ ಭಾರತೀಯರ ತಂಡ ಯಶಸ್ವಿಯಾಗಿದೆ. ಈ ಮೂಲಕ ಅನಿವಾಸಿ ಕನ್ನಡಿಗರ ತಂಡಗಳು ಮಾದರಿ ಕಾರ್ಯ ಕೈಗೊಂಡಿವೆ.
‘ಮಂಗಳೂರಿನ ಕಾವೂರು ನಿವಾಸಿ, ಅನಿವಾಸಿ ಕನ್ನಡಿಗ ದಿಲೀಪ್ (55) ಅವಿವಾಹಿತರು. ತಾಯಿ ಮತ್ತು ಅವಿವಾಹಿತ ಸಹೋದರಿಯರ ಕುಟುಂಬಕ್ಕೆ ಏಕೈಕ ಆಸರೆಯಾಗಿದ್ದರು. ಕಳೆದ 15 ವರ್ಷಗಳಿಂದ ದುಬೈನಲ್ಲಿ ದುಡಿಯುತ್ತಿದ್ದ ದಿಲೀಪ್, ಕಳೆದ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಬ್ರೈನ್ ಸ್ಟ್ರೋಕ್‌ನ ಪರಿಣಾಮ ಕೋಮಾವಸ್ಥೆಗೆ ತಲುಪಿದ್ದರು’ ಎಂದು ಕನ್ನಡಿಗಾಸ್ ಫೆಡರೇಷನ್ ಸಂಚಾಲಕ ಹಿದಾಯತ್ ಅಡ್ಡೂರ್ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.
ಸತತ ಎಂಟು ತಿಂಗಳಿಂದ ಕೋಮಾದಲ್ಲಿದ್ದ ದಿಲೀಪ್ ಕುಮಾರ್ ಕಳೆದ ಶುಕ್ರವಾರ ನಿಧನರಾದರು. ಅವರ ಮೃತದೇಹವನ್ನು ಇಂಡಿಯನ್ ಕಾನ್ಸುಲೇಟ್ ದುಬೈ, ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್), ಕನ್ನಡಿಗಾಸ್ ಫೆಡರೇಷನ್, ಇಂಡಿಯನ್ ಅಸೋಸಿಯೇಷನ್ ಅಜ್ಮಾನ್ ನೆರವಿನಿಂದ ಕೋವಿಡ್ ಸಂದರ್ಭದಲ್ಲಿ ಪಡೆಯಬೇಕಾದ ಎಲ್ಲ ಅನುಮತಿ ಪತ್ರಗಳನ್ನು ಪಡೆದು ತಾಯ್ನಡಿಗೆ ಕಳುಹಿಸಲಾಯಿತು ಎಂದರು.
ಅನಿವಾಸಿ ಸಂಘಟನೆಯ ಮುಖಂಡರು ಆಸ್ಪತ್ರೆಯಲ್ಲಿದ್ದ ದಿಲೀಪ್ ಕುಮಾರ್ ಮತ್ತವರ ಕುಟುಂಬದ ಜೊತೆಗಿದ್ದು, ಪ್ರತೀ ವಾರ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರು. ವೈದ್ಯರೊಂದಿಗೆ ಆರೋಗ್ಯ ವಿಚಾರಿಸಿ, ವೀಡಿಯೋ ಕಾಲ್ ಮೂಲಕ ದಿಲೀಪ್ ಕುಟುಂಬ ದೊಂದಿಗೂ ಸಂಪರ್ಕದಲ್ಲಿದ್ದೆವು ಎಂದು ಮಾಹಿತಿ ನೀಡಿದರು.
ದಿಲೀಪ್ ಆರೋಗ್ಯದ ಕುರಿತು ಒಡಹುಟ್ಟಿದವರಂತೆ ಅಬ್ದುಲ್ ಕರೀಮ್ ನೇತೃತ್ವದ ಕೆಸಿಎಫ್ ತಂಡ ಕಾಳಜಿ ವಹಿಸುತ್ತಿತ್ತು. ಆದರೆ ಕಳೆದ ಶುಕ್ರವಾರ ದಿಲೀಪ್ ಚಿಕಿತ್ಸೆಗೆ ಸ್ಪಂದಿಸದೇ ನಿಧನರಾದರು. ಅವರ ತಾಯಿ, ಸಹೋದರಿಯರು ಮಗನ ಮುಖವನ್ನು ಕೊನೆಯ ಬಾರಿ ನೋಡಬೇಕು. ಹೇಗಾದರೂ ಮೃತದೇಹ ಕಳುಹಿಸಿ ಎಂದು ಕೋರಿಕೊಂಡಾಗ, ಮೃತದೇಹವನ್ನು ತಾಯ್ನೆಡಿಗೆ ತಲುಪಿಸುವ ಬಗ್ಗೆ ಕೆಸಿಎಫ್ ತಂಡ ನಮ್ಮನ್ನು ಸಂಪರ್ಕಿಸಿತು ಎಂದರು.
ಕೂಡಲೇ ಕೆಎನ್‌ಆರ್‌ಐ ಅಧ್ಯಕ್ಷ ಪ್ರವೀಣ್ ಶೆಟ್ಟಿ ಮತ್ತು ದುಬೈ ಕಾನ್ಸುಲೇಟ್ ಕಚೇರಿಯ ಕಾನ್ಸುಲ್ ಜಿತೇಂದ್ರ ಸಿಂಗ್ ನೇಗಿ ಅವರನ್ನು ಸಂಪರ್ಕಿಸಿದೆವು. ಅವರು ಕೂಡ ತಕ್ಷಣವೇ ಸ್ಪಂದಿಸಿ ಕಾನ್ಸುಲೇಟ್ ಮೂಲಕ ಎಲ್ಲ ರೀತಿಯ ವ್ಯವಸ್ಥೆ ಮಾಡುವ ಭರವಸೆ ನೀಡಿದರು. ಅಜ್ಮಾನ್ ಇಂಡಿಯನ್ ಅಸೋಸಿಯೇಷನ್‌ನ ಛಾಯಾದೇವಿ ಕೃಷ್ಣಮೂರ್ತಿಯವರು ದಿಲೀಪ್ ವಿಸಾ, ಇಮಿಗ್ರೇಷನ್, ಡೆತ್ ಸರ್ಟಿಫಿಕೇಟ್ ಪಡೆಯಲು ವ್ಯವಸ್ಥೆ ಮಾಡಿ ಸಹಕರಿಸಿದರು. ಇದೆಲ್ಲರ ಫಲವಾಗಿ ದಿಲೀಪ್ ಮೃತದೇಹ ದುಬೈನಿಂದ ಮಂಗಳೂರಿಗೆ ತಲುಪಿತು. ಮಂಗಳೂರಿನಲ್ಲೂ ಕೆಸಿಎಫ್ ಅವರ ಆಂಬ್ಯುಲೆನ್ಸ್ ಮೂಲಕ ದಿಲೀಪ್ ಮನೆಗೆ ತಲುಪಿಸುವ ವ್ಯವಸ್ಥೆಯೂ ನಡೆಯಿತು ಎಂದು ಹೇಳಿದರು.
ದಿಲೀಪ್‌ನ ಸಹೋದರಿ ಕಿಡ್ನಿ ಸಮಸ್ಯೆಯಿಂದ ಡೈಯಾಲಿಸಿಸ್ ಮಾಡಿಸುತ್ತಿದ್ದರು. ದಿಲೀಪ್ ಆದಾಯವನ್ನೇ ನಂಬಿದ್ದ ಕುಟುಂಬ ದಿಲೀಪ್ ಆಸ್ಪತ್ರೆಗೆ ದಾಖಲಾದ ನಂತರ ಹಣದ ಕೊರತೆಯಿಂದ ಡೈಯಾಲಿಸಿಸ್ ಮಾಡಲಾಗದೆ ಮುಂದೂಡುತ್ತಿದ್ದಾರೆ. ಮದುವೆ ವಯಸ್ಸು ಮೀರಿದ ಸಹೋದರಿ ಮತ್ತು ತಾಯಿಗೆ ಆಸರೆ ಇಲ್ಲ. ಕೆಸಿಎಫ್ ತಂಡ ಅವರ ಕುಟುಂಬಕ್ಕೆ ಹಲವು ಬಾರಿ ರೇಷನ್ ವ್ಯವಸ್ಥೆ ಮಾಡಿತ್ತು. ಸಾರ್ವಜನಿಕರು ಕೂಡ ಆ ಕುಟುಂಬಕ್ಕೆ ಸಹಾಯಹಸ್ತ ನೀಡಬಹುದು, ಸುರೇಖಾ, A/c no: 520101002065998, IFSC code: CORP0000711 , ಕಾರ್ಪೋರೇಶನ್ ಬ್ಯಾಂಕ್, ಕಾವೂರು ಬ್ರಾಂಚ್, ಮಂಗಳೂರು. ಈ ಖಾತೆಗೆ ಧನಸಹಾಯ ಮಾಡಬಹುದು’ ಎಂದು ಹಿದಾಯತ್ ಅಡ್ಡೂರ್ ತಿಳಿಸಿದ್ದಾರೆ.







