ಚಿಕ್ಕಮಗಳೂರು: ಮನೆ ಕೆಲಸಕ್ಕೆಂದು ಕರೆದೊಯ್ದು ದಲಿತ ಬಾಲಕಿಯ ಅತ್ಯಾಚಾರ; ಪ್ರಕರಣ ದಾಖಲು

ಚಿಕ್ಕಮಗಳೂರು, ಜ.29: ಅಪ್ರಾಪ್ತ ವಯಸ್ಸಿನ ದಲಿತ ಸಮುದಾಯದ ಬಾಲಕಿಯೋರ್ವಳನ್ನು ಮನೆಗೆಲಸಕ್ಕೆಂದು ಕರೆದೊಯ್ದು ವ್ಯಕ್ತಿಯೋರ್ವ ಅತ್ಯಾಚಾರ ನಡೆಸಿರುವ ಘಟನೆ ತಾಲೂಕಿನ ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.
ತಾಲೂಕಿನ ಆವುತಿ ಗ್ರಾಮದ ಮಲ್ಲೇಶ್ ಗೌಡ ಎಂಬಾತ ಅದೇ ಗ್ರಾಮದ ದಲಿತ ಸಮುದಾಯದ ಬಾಲಕಿಯೋರ್ವಳನ್ನು ಮನೆ ಕೆಲಸಕ್ಕೆ ಕರೆದೊಯ್ದಿದ್ದು, ಆಕೆ ತನ್ನ ಮನೆಯಲ್ಲಿ ಮನೆ ಕೆಲಸ ಮಾಡಿಕೊಂಡಿದ್ದ ವೇಳೆ ಮಲ್ಲೇಶ್‍ಗೌಡ ನಿರಂತರ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಇತ್ತೀಚೆಗೆ ಬಾಲಕಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ತನ್ನ ಮನೆಗೆ ಹಿಂದಿರುಗಿ ಪೋಷಕರ ಬಳಿ ಇದನ್ನು ಹೇಳಿಕೊಂಡಿದ್ದಾಳೆ. ಪೋಷಕರು ಆಕೆಯನ್ನು ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ದಾಖಲಿಸಿದ್ದಾರೆ. ಬಾಲಕಿಯನ್ನು ವೈದ್ಯರು ಪರೀಕ್ಷಿಸಿದಾಗ ಆಕೆ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದ್ದು, ಬಾಲಕಿ ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದ್ದಾಳೆಂದೂ ತಿಳಿದು ಬಂದಿದೆ.
ಘಟನೆ ಸಂಬಂಧ ಮಲ್ಲಂದೂರು ಪೊಲೀಸರು ಫೋಕ್ಸೊ ಪ್ರಕರಣದಡಿ ದೂರು ದಾಖಲಿಸಿಕೊಂಡು ಮಲ್ಲೇಶ್‍ಗೌಡ ವಿರುದ್ಧ ಎಫ್‍ಐಆರ್ ಕೂಡ ದಾಖಲಿಸಿಕೊಂಡಿದ್ದಾರೆ. ಆದರೆ ಘಟನೆ ನಡೆದು ಹಲವು ದಿನಗಳು ಕಳೆದಿದ್ದರೂ ಪೊಲೀಸರು ಆರೋಪಿಯ ಆರೋಪಿಯನ್ನು ಬಂಧಿಸಲು ವಿಫಲರಾಗಿದ್ದಾರೆಂದು ದಲಿತ ಸಂಘಟನೆಗಳ ಮುಖಂಡರು ಆರೋಪಿಸಿದ್ದು, ಪೊಲೀಸರು ಆರೋಪಿ ಮಲ್ಲೇಶ್‍ಗೌಡ ಪ್ರಭಾವಿ ಹಾಗೂ ಮೇಲ್ವರ್ಗದವನೆಂಬ ಕಾರಣಕ್ಕೆ ಬಂಧಿಸಲು ನಿರ್ಲಕ್ಷ್ಯ ವಹಿಸಿದ್ದಾರೆಂದು ದೂರಿದ್ದಾರೆ.
ಮಲ್ಲಂದೂರು ಪೊಲೀಸರು ದಲಿತ ದೌರ್ಜನ್ಯ ಪ್ರಕರಣಗಳನ್ನು ನಿರ್ಲಕ್ಷ್ಯ ಮಾಡುತ್ತಿದ್ದು, ಇದರಿಂದಾಗಿ ಶೋಷಿತ ಸಮುದಾಯದ ಜನರಿಗೆ ನ್ಯಾಯ ಮರಿಚೀಕೆಯಾಗುತ್ತಿದೆ. ಮಲ್ಲಂದೂರು ಭಾಗದಲ್ಲಿ ಆಗಿಂದಾಗ್ಗೆ ದಲಿತ ದೌರ್ಜನ್ಯ ಪ್ರಕರಣಗಳು ನಡೆಯುತ್ತಿದ್ದು, ಪೊಲೀಸರು ಪ್ರಭಾವಿಗಳ ಆಮಿಷಗಳಿಗೆ ಒಳಗಾಗಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲು ನಿರ್ಲಕ್ಷ್ಯ ವಹಿಸುತ್ತಿದ್ದಾರೆಂದು ಆರೋಪಿಸಿರುವ ದಲಿತ ಸಂಘಟನೆಗಳ ಮುಖಂಡರು, ಬಾಲಕಿಯ ಅತ್ಯಾಚಾರ ಪ್ರಕರಣದ ಆರೋಪಿ ಮಲ್ಲೇಶ್‍ಗೌಡನನ್ನು ಕೂಡಲೇ ಬಂಧಿಸಬೇಕು. ತಪ್ಪಿದಲ್ಲಿ ಪೊಲೀಸ್ ಠಾಣೆ ಎದುರು ಧರಣಿ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಮಲ್ಲಂದೂರು ಪೊಲೀಸರು ದಲಿತ ಸಮುದಾಯದ ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ಪದೇ ಪದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಆವುತಿ ಬಾಲಕಿಯ ಅತ್ಯಾಚಾರ ಪ್ರಕರಣದ ಆರೋಪಿ ತನ್ನ ಗ್ರಾಮದಲ್ಲಿ ರಾಜಾರೋಷವಾಗಿ ಓಡಾಡಿಕೊಂಡಿದ್ದರೂ ಪೊಲೀಸರು ಆತನನ್ನು ಬಂಧಿಸಲು ನಿರ್ಲಕ್ಷ್ಯವಹಿಸಿದ್ದಾರೆ. ನೊಂದ ಬಾಲಕಿಗೆ ಪೊಲೀಸ್ ಇಲಾಖೆ ನ್ಯಾಯ ಕೊಡಿಸಬೇಕು. ಆರೋಪಿಯನ್ನು ಕೂಡಲೇ ಬಂಧಿಸಬೇಕು. ಪೊಲೀಸ್ ಠಾಣೆ ಎದುರು ಧರಣಿ ನಡೆಸಲಾಗುವುದು.
- ಸಂತೋಷ್, ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷಮಲ್ಲೇಶ್ಗೌಡ ಎಂಬಾತ ಬಾಲಕಿಯನ್ನು ಮನೆ ಕೆಲಸಕ್ಕೆ ಕರೆದೊಯ್ಯು ಆಕೆಯನ್ನು ಗರ್ಭಿಣಿಯನ್ನಾಗಿಸಿದ್ದಾನೆ. ಈ ಸಂಬಂಧ ಬಾಲಕಿಯ ಹೇಳಿಕೆ ಮೇರೆಗೆ ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿ ತಲೆ ಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ.
- ಪ್ರಭು, ಡಿವೈಎಸ್ಪಿ, ಚಿಕ್ಕಮಗಳೂರು
ಮಲ್ಲಂದೂರು ಠಾಣೆಯಲ್ಲಿ ಬಾಲಕಿಯ ಅತ್ಯಾಚಾರ ಪ್ರಕರಣ ಸಂಬಂಧ ದೂರು ದಾಖಲಾಗಿದೆ. ಎಫ್‍ಐಆರ್ ದಾಖಲಿಸಿದ್ದೇವೆ. ಆರೋಪಿಯ ಬಂಧನಕ್ಕೆ ಕ್ರಮವಹಿಸಲಾಗುವುದು.
- ಅಕ್ಷಯ್ ಎಂ.ಎಚ್, ಎಸ್ಪಿ







