ಉತ್ತರ ನೀಡಬೇಕಾದ ಸಚಿವ ಸದನಕ್ಕೆ ಗೈರು: ಸಿದ್ದರಾಮಯ್ಯ ಆಕ್ಷೇಪ

ಬೆಂಗಳೂರು, ಜ. 29: ‘ವಿಧಾನಸಭೆಯ ಕಲಾಪದಲ್ಲಿ ಸದಸ್ಯರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಬೇಕಾದ ತೋಟಗಾರಿಕೆ ಮತ್ತು ರೇಶ್ಮೆ ಸಚಿವ ಆರ್.ಶಂಕರ್ ಅವರು ಎಲ್ಲಿ?' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಅವರನ್ನು ಖಾರವಾಗಿ ಪ್ರಶ್ನಿಸಿದ ಪ್ರಸಂಗ ನಡೆಯಿತು.
ಶುಕ್ರವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಆನಂದ್ ಸಿದ್ಧು ನ್ಯಾಮಗೌಡ ಕೇಳಿದ ಪ್ರಶ್ನೆಗೆ ಸಚಿವ ಆರ್.ಶಂಕರ್ ಪರವಾಗಿ ಡಿಸಿಎಂ ಡಾ.ಅಶ್ವತ್ಥ ನಾರಾಯಣ ಉತ್ತರ ನೀಡಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಅನಿವಾರ್ಯ ಕಾರಣಗಳನ್ನು ಹೊರತುಪಡಿಸಿದರೆ ಸಚಿವರು ಪ್ರಶ್ನೋತ್ತರ ಕಲಾಪಕ್ಕೆ ಗೈರು ಹಾಜರಾಗುವಂತಿಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಅಶ್ವತ್ಥ ನಾರಾಯಣ, ಉಪಸಭಾಪತಿ ಚುನಾವಣೆ ನಡೆಯುತ್ತಿದೆ. ಹೀಗಾಗಿ ಸಚಿವ ಆರ್.ಶಂಕರ್ ಅವರು ಪರಿಷತ್‍ಗೆ ತೆರಳಿದ್ದಾರೆ ಎಂದು ಸ್ಪಷ್ಟನೆ ನೀಡಿದರು. ‘ಇಲ್ಲಿ ಸದಸ್ಯರ ಪ್ರಶ್ನೆಗೆ ಉತ್ತರ ನೀಡುವುದನ್ನು ಬಿಟ್ಟು ಅಲ್ಲಿಗೆ ಹೋಗಿರುವುದು ಸರಿಯಲ್ಲ' ಎಂದು ಸಿದ್ದರಾಮಯ್ಯ ಆಕ್ಷೇಪಿಸಿದರು.
ಮಾಹಿತಿ ಕೊಟ್ಟು ಹೋಗುವ ಸೌಜನ್ಯ ಇಲ್ಲವೇ?: ಆರಂಭದಲ್ಲಿ ಸಚಿವ ಆರ್.ಶಂಕರ್ ಗೈರುಹಾಜರಿ ವಿಚಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸದಸ್ಯರ ಪ್ರಶ್ನೆಗೆ ಉತ್ತರ ನೀಡುವ ವೇಳೆ ಸಚಿವರು ಹಾಜರಾಗಿರಬೇಕು. ಸಚಿವರ ಪರವಾಗಿ ಉತ್ತರ ನೀಡುವ ವೇಳೆ ಕನಿಷ್ಠ ಸದನಕ್ಕೆ ಅವರು ಮಾಹಿತಿ ಕೊಟ್ಟು ಹೊರಗೆ ಹೋಗುವ ಸೌಜನ್ಯ ಇಲ್ಲವೇ? ಎಂದು ಪ್ರಶ್ನಿಸಿದರು.
ಸದನದಲ್ಲಿ ಒಂದು ಪದ್ಧತಿ ಇದ್ದು ಅದನ್ನು ಪಾಲಿಸಬೇಕು. ಸಚಿವ ಆರ್.ಶಂಕರ್ ಕೊಡಬೇಕಾದ ಉತ್ತರವನ್ನು ನೀವು ಕೊಡುತ್ತಿದ್ದೀರಿ, ಸದನಕ್ಕೂ ಒಂದು ಪದ್ಧತಿ ಇರುತ್ತದೆ. ಅದನ್ನು ಸಚಿವರು ಪಾಲಿಸಬೇಕು ಎಂದು ಕಾಗೇರಿ, ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಅವರಿಗೆ ನಿರ್ದೇಶನ ನೀಡಿದರು.