ಅಕ್ರಮ ಜಿಂಕೆ ಕೋಡು ಸಾಗಾಟ: ಆರೋಪಿ ಸೆರೆ

ಪುತ್ತೂರು : ಪೊಲೀಸ್ ಅರಣ್ಯ ಸಂಚಾರಿದಳ ಮತ್ತು ಅರಣ್ಯ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಜಿಂಕೆ ಕೋಡನ್ನು ಸಾಗಾಟ ನಡೆಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಪುತ್ತೂರು ತಾಲೂಕಿನ ಕಬಕ ನಿವಾಸಿ ಶೇಖ್ ಅನ್ಸಾರ್ ಎಂದು ಗುರುತಿಸಲಾಗಿದೆ. ಆರೋಪಿಯಿಂದ ಸುಮಾರು ರೂ. 50 ಸಾವಿರ ಮೌಲ್ಯದ ಜಿಂಕೆಯೊಂದರ ಕೋಡು ಮತ್ತು ಅದನ್ನು ಸಾಗಾಟ ಮಾಡಲು ಬಳಸುತ್ತಿದ್ದ ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಪುತ್ತೂರು ನಗರದ ಸೂತ್ರಬೆಟ್ಟು ಎಂಬಲ್ಲಿ ಮಾರುತಿ ಕಾರಿನಲ್ಲಿ ಜಿಂಕೆ ಕೋಡು ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ಹಿನ್ನಲೆಯಲ್ಲಿ ಪೊಲೀಸ್ ಅರಣ್ಯ ಸಂಚಾರಿ ದಳ ಮತ್ತು ಅರಣ್ಯ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿತ್ತು. ಈ ಸಂದರ್ಭದಲ್ಲಿ ಕಾರಿನಲ್ಲಿದ್ದ ಇನ್ನೋರ್ವ ಆರೋಪಿ ನಗರದ ಸಾಮೆತ್ತಡ್ಕ ನಿವಾಸಿ ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಪುತ್ತೂರು ಪೊಲೀಸ್ ಅರಣ್ಯ ಸಂಚಾರ ಠಾಣೆಯ ಎಸ್‍ಐ ಜಾಕಿ, ಸಿಬ್ಬಂದಿಗಳಾದ ಉದಯ, ಸಂತೋಷ್, ವಿಜಯ ಸುವರ್ಣ, ಸುಂದರ ಶೆಟ್ಟಿ, ಸರಸ್ವತಿ ಮತ್ತು ಉಪವಲಯ ಅರಣ್ಯಾಧಿಕಾರಿ ಶಿವಾನಂದ ಆಚಾರ್ಯ, ಸಿಬ್ಬಂದಿಗಳಾದ ಸಂಜಯ್, ಶೇಖರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.





