ಮನಪಾ : ಫೆ.1ರಿಂದ ಪೂರ್ಣ ಪ್ರಮಾಣದಲ್ಲಿ ಆಸ್ತಿ ಸಮೀಕ್ಷೆ

ಮಂಗಳೂರು, ಜ.29: ಆಸ್ತಿ ತೆರಿಗೆಯನ್ನು ಕ್ರಮಬದ್ಧವಾಗಿ ಸಂಗ್ರಹಿಸುವ ಉದ್ದೇಶದಿಂದ ಮಂಗಳೂರು ಮಹಾನಗರ ಪಾಲಿಕೆಯ ಎಲ್ಲಾ ವಾರ್ಡ್‌ಗಳಲ್ಲಿ ಫೆ. 1ರಿಂದ ಪೂರ್ಣ ಪ್ರಮಾಣದಲ್ಲಿ ಆಸ್ತಿ ಸಮೀಕ್ಷೆ ಕಾರ್ಯ ಆರಂಭಗೊಳ್ಳಲಿದೆ.
ಮೇಯರ್ ದಿವಾಕರ ಪಾಂಡೇಶ್ವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಮನಪಾ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದೆ.
ಸದ್ಯ ನೀರಿನ ಬಿಲ್ ನೀಡಲು ಬರುವ ಎಂಪಿಡಬ್ಲು ಸಿಬ್ಬಂದಿಯಿಂದಲೇ ಸಮೀಕ್ಷೆ ಕಾರ್ಯ ನಡೆಸಲಾಗುವುದು. ಅಗತ್ಯವಿದ್ದಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ಹೊರ ಗುತ್ತಿಗೆಯಲ್ಲಿ ನೇಮಕ ಮಾಡಿಕೊಂಡು ಸಮೀಕ್ಷೆ ಕಾರ್ಯ ನಡೆಯಲಿದೆ. ಸಾರ್ವಜನಿಕರು ತಮ್ಮ ಆಸ್ತಿ ತೆರಿಗೆ ಪಾವತಿಸಿದ ಎಸ್‌ಎಎಸ್ ಫಾರಂನ ಪ್ರತಿಯನ್ನು ಸಿಬ್ಬಂದಿಗೆ ಒದಗಿಸಿ ಮನೆ ಹಾಗೂ ಆಸ್ತಿಯ ಪರಿಶೀಲನೆಗೆ ಅವಕಾಶ ಒದಗಿಸಿ ಸಮೀಕ್ಷೆಗೆ ಸಹಕರಿಸಬೇಕು ಎಂದು ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಮನವಿ ಮಾಡಿದರು.
ಮನಪಾದಿಂದ ಡಿಜಿಟಲ್ ವೇದಿಕೆಯಡಿ ಆಸ್ತಿಗಳ ಮರು ವೌಲ್ಯಮಾಪನ ಮಾಡುವುದು ಈ ಸಮೀಕ್ಷೆಯ ಉದ್ದೇಶವಾಗಿದೆ. ಈಗಾಗಲೇ ನಗರದ ಕೊಡಿಯಾಲ್‌ಬೈಲ್ ವಾರ್ಡ್‌ನಲ್ಲಿ ಕಳೆದ ಒಂದು ತಿಂಗಳಿನಿಂದೀಚೆಗೆ ಪ್ರಾತ್ಯಕ್ಷಿಕೆಯಾಗಿ ಈ ಸಮೀಕ್ಷೆ ಕಾರ್ಯ ನಡೆಯುತ್ತಿದೆ. ಪಾಲಿಕೆಯು ಅಭಿವೃದ್ಧಿಪಡಿಸಿದ ಮೊಬೈಲ್ ಅಪ್ಲಿಕೇಶನ್ ಮೂಲಕ ಸಿಬ್ಬಂದಿಗಳು ಆಸ್ತಿ ಸಮೀಕ್ಷೆ ನಡೆಸಬಹುದು. ಆಸ್ತಿಯ ಪ್ರಕಾರವನ್ನು ಮನೆಗಳು, ಅಂಗಡಿಗಳು, ವಾಣಿಜ್ಯ ಸಂಕೀರ್ಣ, ಅಪಾರ್ಟ್‌ಮೆಂಟ್, ಮಾಲ್, ವಸತಿ/ವಾಣಿಜ್ಯ ಕಟ್ಟಡ, ಕೈಗಾರಿಕಾ, ಸಾಂಸ್ಥಿಕ, ದತ್ತಿ, ಸಾರ್ವಜನಿಕ ಆಸ್ತಿ/ ಸರಕಾರಿ ಆಸ್ತಿ, ಮದುವೆ ಹಾಲ್ ಎಂದು ವರ್ಗೀಕರಿಸಲಾಗಿದೆ. ಸಮೀಕ್ಷೆ ಮಾಡುವವರು ಮನೆ ಮಾಲಕರ ಹೆಸರು, ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ, ಮೆಸ್ಕಾಂ ಸಂಖ್ಯೆ, ನೀರಿನ ಸಂಪರ್ಕ ಸಂಖ್ಯೆ, ಎಸ್‌ಎಎಸ್ ಸಂಖ್ಯೆ, ವಾಸಿಸುವ ಘಟಕಗಳ ಸಂಖ್ಯೆ, ಅಂಗಡಿಗಳ ಸಂಖ್ಯೆ, ಮಾಲಕತ್ವ, ನಿರ್ಮಾಣ ವರ್ಷ, ನೆಲದ ಪ್ರಕಾರ, ಮರದ ಪ್ರಕಾರ, ಛಾವಣಿ, ಚದರ ಅಡಿ/ ಸೆಂಟ್ಸ್‌ಗಳಲ್ಲಿ ಕಟ್ಟಡದ ವಿಸ್ತೀರ್ಣವನ್ನು ದಾಖಲಿಸಲಿದ್ದಾರೆ ಎಂದು ಆಯುಕ್ತ ಅಕ್ಷಯ್ ಶ್ರೀಧರ್ ವಿವರಿಸಿದರು.
ಸಾಮಾನ್ಯ ಸಭೆಯಲ್ಲಿ ಉಪ ಮೇಯರ್ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಪೂರ್ಣಿಮಾ, ಶರತ್ ಕುಮಾರ್, ಜಗದೀಶ್ ಶೆಟ್ಟಿ, ಕಿರಣ್ ಕುಮಾರ್ ಉಪಸ್ಥಿತರಿದ್ದರು.







