‘ಈ ಪ್ರತಿಭಟನೆ ಸಾಯಲು ನಾವು ಬಿಡುವುದಿಲ್ಲ’: ದಿಲ್ಲಿಯತ್ತ ಮತ್ತಷ್ಟು ರೈತರ ದೌಡು

ಹೊಸದಿಲ್ಲಿ,ಜ.29: ಮೂರು ನೂತನ ಕೃಷಿ ಕಾಯ್ದೆಗಳ ವಿರುದ್ದ ಪ್ರತಿಭಟನೆಯನ್ನು ನಡೆಸುತ್ತಿರುವ ರೈತರು ಗಣತಂತ್ರ ದಿನದಂದು ದಿಲ್ಲಿಯಲ್ಲಿ ಹಮ್ಮಿಕೊಂಡಿದ್ದ ಟ್ರ್ಯಾಕ್ಟರ್ ರ್ಯಾಲಿ ಸಂದರ್ಭ ಹಿಂಸಾಚಾರಗಳು ಭುಗಿಲೆದ್ದ ಬಳಿಕ ಗಾಝಿಪುರದಲ್ಲಿ ಪ್ರತಿಭಟನಾಕಾರರ ದಟ್ಟಣೆ ಕಡಿಮೆಯಾಗಿದ್ದು,ಪ್ರತಿಭಟನೆಗೆ ಹೊಸಜೀವ ನೀಡಲು ಇನ್ನಷ್ಟು ರೈತರು ಗುರುವಾರ ಮಧ್ಯರಾತ್ರಿಯಿಂದ ಪ್ರತಿಭಟನಾ ಸ್ಥಳದಲ್ಲಿ ಜಮಾವಣೆಗೊಳ್ಳುತ್ತಿದ್ದಾರೆ.
ಉತ್ತರ ಪ್ರದೇಶ, ಹರ್ಯಾಣ ಮತ್ತು ಪಂಜಾಬ್ ಗಳಿಂದ ಹೆಚ್ಚಿನ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ದಿಲ್ಲಿಯತ್ತ ದೌಡಾಯಿಸುತ್ತಿದ್ದಾರೆ ಎಂದು ಗಾಝಿಪುರದಲ್ಲಿ ಪ್ರತಿಭಟನಾನಿರತರು ತಿಳಿಸಿದರು.
ಪ್ರತಿಭಟನೆಗಾಗಿ ಜನರನ್ನು ಕ್ರೋಢೀಕರಿಸಲು ಮುಝಫ್ಫರ್‌ನಗರ,ಶಾಮ್ಲಿ,ಬಾಘಪತ್ ಮತ್ತು ಬಡೌತ್ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಹಾಪಂಚಾಯತ್‌ಗಳು ನಡೆಯುತ್ತಿವೆ ಎಂದು ರೈತರು ಸುದ್ದಿಸಂಸ್ಥೆಗೆ ತಿಳಿಸಿದರು.
ಭಾರತೀಯ ಕಿಸಾನ ಯೂನಿಯನ್ ನಾಯಕ ರಾಕೇಶ ಟಿಕಾಯತ್ ಅವರು ಕ್ಯಾಮೆರಾದೆದುರು ಕಣ್ಣೀರು ಸುರಿಸುತ್ತಿರುವ ವೀಡಿಯೊವನ್ನು ಪ್ರಸ್ತಾಪಿಸಿದ ಬುಲಂದಶಹರ್‌ನ ರೈತರೋರ್ವರು,‘ಟಿಕಾಯತ್‌ರ ಮನವಿಯ ಮೇರೆಗೆ ರೈತರು ದಿಲ್ಲಿಯತ್ತ ಧಾವಿಸುತ್ತಿದ್ದಾರೆ. ಈ ಪ್ರತಿಭಟನೆ ಸಾಯಲು ನಾವು ಬಿಡುವುದಿಲ್ಲ ’ಎಂದು ತಿಳಿಸಿದರು.
ಗುರುವಾರ ಮಧ್ಯರಾತ್ರಿಯ ವೇಳೆಗೆ ಪ್ರತಿಭಟನೆಯನ್ನು ಬೆಂಬಲಿಸಲು ಸಮೀಪದ ಜಿಲ್ಲೆಗಳಿಂದ ಸುಮಾರು 500 ರೈತರು ಘಾಜಿಪುರವನ್ನು ತಲುಪಿದ್ದು,ರಾತ್ರಿಯಿಡೀ ರೈತರು ಸಣ್ಣ ಸಣ್ಣ ಗುಂಪುಗಳಾಗಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸುತ್ತಲೇ ಇದ್ದರು.
ಉತ್ತರಾಖಂಡದ ಉಧಮ್‌ನಗರ ಮತ್ತು ತೇರಾಯಿ ಪ್ರದೇಶದಿಂದ ಸುಮಾರು 6,000 ಜನರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ದಿಲ್ಲಿಯತ್ತ ಬರುತ್ತಿದ್ದಾರೆ. ದಟ್ಟವಾದ ಮಂಜು ಮತ್ತು ಹಲವಾರು ಸ್ಥಳಗಳಲ್ಲಿ ಪೊಲೀಸ್ ಬ್ಯಾರಿಕೇಡ್‌ಗಳಿಂದಾಗಿ ಅವರ ಆಗಮನ ವಿಳಂಬವಾಗುತ್ತಿದೆ. ಸಾವಿರಾರು ಜನರು ಪ್ರತಿಭಟನೆಯಲ್ಲಿ ಸೇರುವ ನಿರೀಕ್ಷೆಯಿದೆ ಎಂದು ತೇರಾಯಿ ಕಿಸಾನ್ ಸಂಘಟನೆಯ ಅಧ್ಯಕ್ಷ ತಜಿಂದರ್ ಸಿಂಗ್ ವಿರ್ಕ್ ಸುದ್ದಿಸಂಸ್ಥೆಗೆ ತಿಳಿಸಿದರು.
ಗುರುವಾರದಿಂದಲೇ ಗಾಝಿಪುರದಲ್ಲಿ ನೂರಾರು ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು,ನಿನ್ನೆ ಮಧ್ಯರಾತ್ರಿಯ ಬಳಿಕ ಗಾಝಿಯಾಬಾದ್ ಜಿಲ್ಲಾಧಿಕಾರಿ ಅಜಯ ಶಂಕರ ಪಾಂಡೆ ಮತ್ತು ಹಿರಿಯ ಎಸ್‌ಪಿ ಕಲಾನಿಧಿ ನೈಥಾನಿ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪುನರ್‌ಪರಿಶೀಲಿಸಿದ್ದಾರೆ.







