ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಪ್ರಕರಣ: ಆರೋಪಿಗೆ 10ವರ್ಷ ಜೈಲು ಶಿಕ್ಷೆ
ಕುಂದಾಪುರ, ಜ.29: ಆರು ವರ್ಷಗಳ ಹಿಂದೆ ಯುವತಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರಗೈದ ಬಳಿಕ ಮದುವೆ ನಿರಾಕರಿ ಸಿದ ಆರೋಪಿಗೆ ಕುಂದಾಪುರದಲ್ಲಿರುವ ಜಿಲ್ಲಾ ಮತ್ತು ಹೆಚ್ಚುವರಿ ಸತ್ರ ನ್ಯಾಯಾಲಯ 10ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಇಂದು ಆದೇಶ ನೀಡಿದೆ.
ಆರ್ಡಿ ಸಮೀಪದ ಕೊಂಜಾಡಿ ನಿವಾಸಿ ಪ್ರದೀಪ್ ನಾಯ್ಕ್ (36) ಶಿಕ್ಷೆಗೆ ಗುರಿಯಾಗಿರುವ ಆರೋಪಿ. 2005ರಲ್ಲಿ ಹೊಸ ಮನೆಯ ಗಾರೆ ಕೆಲಸಕ್ಕೆಂದು ಬಂದಿದ್ದ ಪ್ರದೀಪ್, ಅಲ್ಲಿನ ಯುವತಿಯೊಂದಿಗೆ ಸ್ನೇಹ ಬೆಳಸಿದ್ದನು. ಬಳಿಕ ಆಕೆಯನ್ನು ಮದುವೆಯಾಗು ವುದಾಗಿ ನಂಬಿಸಿ ಆಕೆಯೊಂದಿಗೆ ದೈಹಿಕ ಸಂಪರ್ಕ ನಡೆಸಿದ್ದನು. ಮುಂದೆ ಮದುವೆ ನಿರಾಕರಿಸಿ ಆಕೆಗೆ ವಂಚಿಸಿದ್ದನು. ಈ ಬಗ್ಗೆ ಯುವತಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಂದಿನ ಕುಂದಾಪುರ ವೃತ್ತ ನಿರೀಕ್ಷಕ ದಿವಾಕರ ಪಿ.ಎಂ. ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸಂತ್ರಸ್ತ ಯುವತಿ ಹಾಗೂ ಆಕೆ ತಂದೆ-ತಾಯಿ ಸೇರಿ ಒಟ್ಟು 9 ಮಂದಿ ನ್ಯಾಯಾಲಯದಲ್ಲಿ ಸಾಕ್ಷಿ ನುಡಿದಿದ್ದರು. ವಾದ ವಿವಾದ ಆಲಿಸಿದ ನ್ಯಾಯಾಧೀಶ ನರಹರಿ ಪ್ರಭಾಕರ್ ಮರಾಠೆ ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟರು.
ಅದರಂತೆ ಅತ್ಯಾಚಾರ ಪ್ರಕರಣ ಐಪಿಸಿ ಕಲಂ 376ಗೆ 10 ವರ್ಷ ಕಠಿಣ ಜೈಲು ಮತ್ತು 50 ಸಾವಿರ ದಂಡ, ಮನೆಗೆ ಅಕ್ರಮ ಪ್ರವೇಶ ಮಾಡಿದ್ದಕ್ಕೆ ಐಪಿಸಿ ಸೆಕ್ಷನ್ 448 ಹಾಗೂ ಮೋಸ (ಐಪಿಸಿ ಕಲಂ 417) ಕ್ಕೆ ತಲಾ 1 ವರ್ಷ ಸಜೆ ಮತ್ತು ತಲಾ 5ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡದಲ್ಲಿ 50 ಸಾವಿರ ರೂ. ಹಣವನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡಲು ನ್ಯಾಯಾಧೀಶರು ಆದೇಶ ದಲ್ಲಿ ತಿಳಿಸಿದರು. ಪ್ರಾಸಿಕ್ಯೂಶನ್ ಪರವಾಗಿ ಜಿಲ್ಲಾ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ಬೇಳೂರು ವಾದಿಸಿದ್ದರು.







