ಆರ್ಥಿಕ ಸಮೀಕ್ಷೆ ಮಂಡನೆ:2021-22ರಲ್ಲಿ ಶೇ.11ರಷ್ಟು ಆರ್ಥಿಕ ಬೆಳವಣಿಗೆ ನಿರೀಕ್ಷೆ
ಬಜೆಟ್ 2021

ಹೊಸದಿಲ್ಲಿ,ಜ.29: ಬಜೆಟ್ ಮಂಡನೆಗೆ ಪೂರ್ವಭಾವಿಯಾಗಿ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಸಂಸತ್ತಿನಲ್ಲಿ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದ್ದು,ರಾಷ್ಟ್ರವ್ಯಾಪಿ ಕೊರೋನವೈರಸ್ ಲಸಿಕೆ ನೀಡಿಕೆ ಅಭಿಯಾನ ಮತ್ತು ಬಳಕೆದಾರ ಬೇಡಿಕೆಯು ಪುನಃಶ್ಚೇತನಗೊಂಡಿರುವ ಹಿನ್ನೆಲೆಯಲ್ಲಿ ಎ.1ರಿಂದ ಆರಂಭಗೊಳ್ಳಲಿರುವ 2021-22ನೇ ಹಣಕಾಸು ವರ್ಷದಲ್ಲಿ ಆರ್ಥಿಕತೆಯು ಶೇ.11ರ ದರದಲ್ಲಿ ಬೆಳವಣಿಗೆಯಾಗುವ ಅಂದಾಜನ್ನು ವ್ಯಕ್ತಪಡಿಸಲಾಗಿದೆ.
ಮಾ.31ರವರೆಗಿನ ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕತೆಯು ಕಳೆದ ನಾಲ್ಕು ದಶಕಗಳಲ್ಲಿ ಕನಿಷ್ಠವಾದ ಶೇ.7.7ರ ಮಟ್ಟಕ್ಕೆ ಕುಗ್ಗಲಿದೆ ಎಂದು ಸರಕಾರವು ಆರ್ಥಿಕ ಸಮೀಕ್ಷೆಯಲ್ಲಿ ಹೇಳಿದೆ.
ಆದರೆ ಕೊರೋನವೈರಸ್ ವಿರುದ್ಧ ಲಸಿಕೆ ಬಂದಿರುವುದು ಮುಂದಿನ ವರ್ಷ ಶೇ.11ರಷ್ಟು ಆರ್ಥಿಕ ಬೆಳವಣಿಗೆ ದರದೊಂದಿಗೆ ದೇಶದ ಆರ್ಥಿಕತೆಗೆ ಹೊಸ ಶಕ್ತಿಯನ್ನು ನೀಡಲಿದೆ ಮತ್ತು 1991ರಲ್ಲಿ ಆರ್ಥಿಕ ಉದಾರೀಕರಣದ ಬಳಿಕ ಅತ್ಯಂತ ಪ್ರಬಲ ಬೆಳವಣಿಗೆಯನ್ನು ದಾಖಲಿಸುವ ಮೂಲಕ ಆರ್ಥಿಕತೆಯನ್ನು ಮರಳಿ ಹಳಿಗೆ ತರಲಿದೆ ಎಂದು ಸರಕಾರವು ವಿಶ್ವಾಸವನ್ನು ವ್ಯಕ್ತಪಡಿಸಿದೆ.
ಆರ್ಥಿಕ ಸಮೀಕ್ಷೆಯಲ್ಲಿನ ಅಂದಾಜುಗಳು ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಮಂಡಿಸಲಿರುವ 2021-22ನೇ ಸಾಲಿನ ಮುಂಗಡಪತ್ರದಲ್ಲಿನ ಅಂಕಿಅಂಶಗಳಿಗೆ ಆಧಾರವಾಗಲಿವೆ.
ಸಮೀಕ್ಷೆಯು ಆರ್ಥಿಕ ಚೇತರಿಕೆಯ ಭವಿಷ್ಯವನ್ನು ನೀಡಿದೆಯಾದರೂ,ಕೊರೋನವೈರಸ್ ಸಾಂಕ್ರಾಮಿಕದ ಮೊದಲಿನ ಜಿಡಿಪಿ ಮಟ್ಟವನ್ನು ತಲುಪಲು ಕನಿಷ್ಠ ಎರಡು ವರ್ಷಗಳು ಬೇಕಾಗುತ್ತವೆ ಎಂದು ಎಚ್ಚರಿಕೆಯನ್ನೂ ನೀಡಿದೆ.
ಬೃಹತ್ ಲಸಿಕೆ ಅಭಿಯಾನದೊಂದಿಗೆ ಆರ್ಥಿಕತೆಯು ಸಾಮಾನ್ಯ ಸ್ಥಿತಿಗೆ ಮರಳುತ್ತಿದ್ದು,ಸೇವೆ,ಬಳಕೆ ಮತ್ತು ಹೂಡಿಕೆ ಕ್ಷೇತ್ರಗಳಲ್ಲಿ ಸದೃಢ ಬೆಳವಣಿಗೆಯ ನಿರೀಕ್ಷೆಗಳು ಗರಿಗೆದರಿವೆ ಎಂದು ಸಮೀಕ್ಷೆಯು ಹೇಳಿದೆ.
ನೂತನ ಕೃಷಿ ಕಾನೂನುಗಳ ಸಮರ್ಥನೆ
ನೂತನ ಕೃಷಿ ಕಾನೂನುಗಳನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಆರ್ಥಿಕ ಸಮೀಕ್ಷೆಯು,ಅವು ಮಾರುಕಟ್ಟೆ ಸ್ವಾತಂತ್ರ್ಯದ ಹೊಸ ಯುಗಕ್ಕೆ ನಾಂದಿ ಹಾಡಿವೆ ಮತ್ತು ದೀರ್ಘಾವಧಿಯಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರ ಬದುಕುಗಳನ್ನು ಹಸನುಗೊಳಿಸಲಿವೆ ಎಂದು ಹೇಳಿದೆ.
ಈ ಕೃಷಿ ಕಾನೂನುಗಳನ್ನು ಮುಖ್ಯವಾಗಿ ‘ಪ್ರತಿಗಾಮಿ’ ಎಪಿಎಂಸಿ ನಿಯಂತ್ರಿತ ಮಾರುಕಟ್ಟೆ ವ್ಯವಸ್ಥೆಯಿಂದಾಗಿ ತೀವ್ರವಾಗಿ ನಲುಗಿದ್ದ,ದೇಶದ ಒಟ್ಟು ರೈತರಲ್ಲಿ ಸುಮಾರು ಶೇ.85ರಷ್ಟಿರುವ ಸಣ್ಣ ಮತ್ತು ಅತಿಸಣ್ಣ ರೈತರ ಲಾಭಕ್ಕಾಗಿ ರೂಪಿಸಲಾಗಿದೆ ಎಂದು ಸಮೀಕ್ಷೆಯು ಹೇಳಿದೆ.
ಎಪಿಎಂಸಿಗಳ ಕಾರ್ಯವೈಖರಿ ಮತ್ತು ಅವು ಏಕಸ್ವಾಮ್ಯಗಳನ್ನು ಉತ್ತೇಜಿಸುತ್ತಿರುವ ಬಗ್ಗೆ ಹಲವಾರು ಆರ್ಥಿಕ ಸಮೀಕ್ಷೆಗಳು ಕಳವಳಗಳನ್ನು ವ್ಯಕ್ತಪಡಿಸಿದ್ದವು. ವಿಶೇಷವಾಗಿ 2011-12ರಿಂದೀಚಿನ ಆರ್ಥಿಕ ಸಮೀಕ್ಷೆಗಳು ಈ ಸಂಬಂಧ ಅಗತ್ಯ ಸುಧಾರಣೆಗಳ ಮೇಲೆ ಗಮನವನ್ನು ಕೇಂದ್ರೀಕರಿಸಿದ್ದವು ಎಂದಿರುವ ಹಾಲಿ ಆರ್ಥಿಕ ಸಮೀಕ್ಷೆಯು ಎಂ.ಎಸ್.ಸ್ವಾಮಿನಾಥನ್ ಅಧ್ಯಕ್ಷತೆಯ ರಾಷ್ಟ್ರೀಯ ಕೃಷಿ ಆಯೋಗ ಮತ್ತು ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ನೇತೃತ್ವದ ಉದ್ಯೋಗಾವಕಾಶಗಳ ಕುರಿತ ಕಾರ್ಯಪಡೆ ಸೇರಿದಂತೆ ವಿವಿಧ ಸಮಿತಿಗಳು 2001ರಿಂದ ಕೃಷಿ ಮಾರುಕಟ್ಟೆ ಸುಧಾರಣೆಗಳ ಕುರಿತು ಮಾಡಿದ್ದ ಶಿಫಾರಸುಗಳನ್ನು ಪ್ರಮುಖವಾಗಿ ಬಿಂಬಿಸಿದೆ.







